ಅಮೂಲ್ ಹಿಂದೆ ವ್ಯವಸ್ಥಿತ ಪಿತೂರಿ: ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ, ಎ.9: ರಾಜ್ಯದ ಮಾರುಕಟ್ಟೆಗೆ ಅಮೂಲ್ ಹಾಲು ಮತ್ತು ಮೊಸರನ್ನು ಹರಿಯ ಬಿಟ್ಟಿರುವುದರ ಹಿಂದೆ, ಕೆಎಂಎಫ್ ನಂದಿನಿಯನ್ನು ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ವ್ಯವಸ್ಥಿತ ಪಿತೂರಿ ಅಡಗಿದೆ. ಇದು ಆಳುವ ಬಿಜೆಪಿ ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಮಹಾಮೋಸ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕೆಎಂಎಫ್- ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿಯ ನಂದಿನಿ ಹಾಲು, ಮೊಸರು, ತುಪ್ಪ ವಿಶ್ವಮಾರುಕಟ್ಟೆಯಲ್ಲಿ ಗುರುತಿಸಲ್ಪಟ್ಟಿದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ಸುಮಾರು 15,043 ಗ್ರಾಮೀಣ ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನು ಹೊಂದಿರುವುದಷ್ಟೇ ಅಲ್ಲ ಸುಮಾರು 30 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಸದಸ್ಯತ್ವವನ್ನು ಹೊಂದಿದೆ ಎಂದು ಡಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಹುಶ: ಕೆಎಂಎಫ್‌ನ ಶ್ರೀಮಂತಿಕೆಯ ಮೇಲೆ ಕಣ್ಣು ಹಾಕಿರುವ ಕೇಂದ್ರ ಸಚಿವ ಅಮಿತ್ ಷಾ ನಂದಿನಿಯನ್ನು ತನ್ನ ರಾಜ್ಯದ ಅಮೂಲಿನ ಗೂಟಕ್ಕೆ ಕಟ್ಟಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಸುತ್ತಿರುವುದು ವಿಷಾದನೀಯ. ನಂದಿನಿ ಮೊಸರಿನ ಪ್ಯಾಕೇಟ್ ಮೇಲೆ ಹಿಂದಿಯ ದಹಿ ಹೇರಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿಕೆ ತಿಳಿಸಿದೆ.
ಕೆಎಂಎಫ್‌ನ್ನು ತನ್ನದೇ ರಾಜ್ಯದ ಗುಜರಾತ್ ಕೋ- ಓಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ನಿನಡಿ ತಂದು, ಈಗಾಗಲೇ ಉತ್ತರ ಭಾರತದಲ್ಲಿ ಅನ್ಯಸಂಸ್ಥೆಗಳ ಹಾಲಿನ ಆಕ್ರಮಣದಿಂದ ಜರ್ಜರಿತವಾಗಿರುವ ಅಮೂಲ್‌ನ್ನು ದೇಶವ್ಯಾಪಿಗೊಳಿಸುವುದು ಮತ್ತು ಹಾಲು ಉತ್ಪಾದನೆಯಲ್ಲಿಯೂ ಗುಜರಾತ್ ಏಕಸಾಮ್ಯ ಮೆರೆಸು ವುದು ಇವರ ಗುರಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಅಷ್ಟಕ್ಕೂ ಕೆಎಂಎಫ್ ರಾಜ್ಯದ ಸಹಕಾರಿ ಸಂಸ್ಥೆಗಳ ಕಾನೂನಿನಡಿ ನೊಂದಾಯಿತ ಸಂಸ್ಥೆ. ಇದನ್ನು ದೇಶದ ಇನ್ನೊಂದು ರಾಜ್ಯದ ನೊಂದಾಯಿತ ಸಹಕಾರಿ ಸಂಸ್ಥೆಯೊಂದಿಗಾಗಲಿ ಅಥವಾ ಬಹುರಾಜ್ಯ ನೊಂದಾಯಿತ ಸಹಕಾರಿ ಸಂಸ್ಥೆಯೊಂದಿಗಾಗಲಿ ವಿಲೀನ ಗೊಳಿಸುವುದು ಸಹಕಾರಿ ಸಂಸ್ಥೆಗಳ ನಿಯಮಾವಳಿಗಳ ಉಲ್ಲಂಘನೆ ಎನ್ನಬಹುದು. ಇದು ದೇಶದ ಸಹಕಾರಿ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಬಹುಶ ಈ ಘಟನೆ ಲಾಭದಲ್ಲಿದ್ದ ಈ ನಾಡಿನ ಹೆಮ್ಮೆಯ ವಿಜಯ ಬ್ಯಾಂಕ್‌ನ್ನು ಗುಜರಾತ್ ಮೂಲದ ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಗೊಳಿಸಿರುವ ಈ ಸರಕಾರದ ಜನವಿರೋಧಿ ಪ್ರಕ್ರಿಯೆಯನ್ನು ನೆನಪಿಸುತ್ತದೆ ಎಂದು ಅದು ಹೇಳಿದೆ.
ಬಹುಶ ಯಾವುದೇ ಕಾರಣಕ್ಕೂ ನಂದಿನಿಯನ್ನು ಅಮೂಲ್‌ನೊಂದಿಗೆ ವಿಲೀನಗೊಳಿಸದಂತೆ ನೋಡಿಕೊಳ್ಳು ವುದು ಈ ಸಹಕಾರಿ ಸಂಸ್ಥೆಯ ಎಲ್ಲ ಸದಸ್ಯರ, ಅಧಿಕಾರಗಳ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆದರೆ ದುರಾದೃಷ್ಟವಶಾತ್ ಇಲ್ಲಿಯೂ ಪಕ್ಷ ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ಅದನ್ನು ಬೆಂಬಲಿಸುವ ಮಂದಿ ಸಂಸ್ಥೆಯ ಒಳಗಿದ್ದೇ ನಂದಿನಿಗೆ ವಿಷ ಹಾಕುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







