ಕೆ.ಸಿ.ಎಫ್ ಕತಾರ್ ವತಿಯಿಂದ ಬೃಹತ್ ಇಫ್ತಾರ್ ಕೂಟ

ದೋಹಾ: ಕೆ.ಸಿ.ಎಫ್ ಕತಾರ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ಇಫ್ತಾರ್ ಮೀಟ್ ಕಾರ್ಯಕ್ರಮವು ದೋಹಾದ ಫಿನಿಕ್ಸ್ ಸ್ಕೂಲ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಇಫ್ತಾರ್ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷರಾದ ಮುನೀರ್ ಮಗುಂಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸದಸ್ಯ ಯೂಸುಫ್ ಸಖಾಫಿ ಅಯ್ಯಂಗೇರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಇಫ್ತಾರ್ ಕಾರ್ಯಕ್ರಮ ಸಂಘಟಿಸುವ ಮಹತ್ವ ಹಾಗೂ ಕೆಸಿಎಫ್ ನಡೆಸಿಕೊಂಡು ಬರುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕತಾರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕೆಸಿಎಫ್ ಸಹಕಾರದೊಂದಿಗೆ ನಡೆಸಲ್ಪಡುತ್ತಿರುವ ಇಹ್ಸಾನ್ ಕರ್ನಾಟಕ ಕಾರ್ಯಾಯೋಜನೆಯ ಬಗ್ಗೆ ಸಭಿಕ ರೊಂದಿಗೆ ಹಂಚಿಕೊಂಡರು.
ವೇದಿಕೆಯಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಅಧ್ಯಕ್ಷರಾದ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಪ್ರಕಾಶನ ವಿಭಾಗದ ಅಧ್ಯಕ್ಷರಾದ ಯಹ್ಯಾ ಸಅದಿ, ಶಿಕ್ಷಣ ವಿಭಾಗದ ಅಧ್ಯಕ್ಷರಾದ ಖಾಲಿದ್ ಹಿಮಮಿ, ಜಮಾಲ್ ಮೂಡಬಿದ್ರೆ, ಶಕೀಲ್ ಉಡುಪಿ ಉಪಸ್ಥಿತರಿದ್ದರು.
ಇಫ್ತಾರ್ ಕಾರ್ಯಕ್ರಮಕ್ಕೆ ಹಾಫಿಳ್ ಉಮರುಲ್ ಫಾರುಖ್ ಸಖಾಫಿ ನೇತೃತ್ವದಲ್ಲಿ ಬದ್ರ್ ಮೌಲಿದ್ ಹಾಗೂ ದುಆ ಮಜ್ಲಿಸ್ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಆಸಿಫ್ ಅಹ್ಸನಿ ಕೊಡಗು ಬದ್ರ್ ಬೈತ್ ಆಲಾಪನೆ ನಡೆಸಿದರು. ಕಾರ್ಯಕ್ರಮದ ಭಾಗವಾಗಿ ಕರ್ನಾಟಕದಾದ್ಯಂತ ಕೆಸಿಎಫ್ ನಡೆಸುವ ಇಹ್ಸಾನ್ ಕಾರ್ಯಾಚರಣೆಯ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕೆಸಿಎಫ್ ಕತಾರ್ ಅಧೀನದಲ್ಲಿ ರಚನೆಗೊಂಡ ಯುನಿಟ್'ಗಳ ಪೈಕಿ ಅಲ್'ಕೋರ್, ಸನಯ್ಯ ಹಾಗೂ ದೋಹಾ ಜದೀದ್ ಯುನಿಟ್ ಗಳಿಗೆ ಮಾನ್ಯತಾ ಪ್ರಮಾಣಪತ್ರ ವಿತರಿಸಲಾಯಿತು.
ಕೆಸಿಫ್ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಸ್ವಾಗತಿಸಿ, ಇಫ್ತಾರ್ ಸ್ವಾಗತ ಸಮಿತಿ ಕನ್ವೀನರ್ ಝಾಕಿರ್ ಚಿಕ್ಕಮಗಳೂರು ವಂದಿಸಿದರು.






.jpeg)
.jpeg)

