ಸಿಕ್ಕಿಂ: ಜೆಎಸಿ ರ್‍ಯಾಲಿಯಲ್ಲಿ ಹಿಂಸಾಚಾರ, ನಿಷೇಧಾಜ್ಞೆ
ಗ್ಯಾಂಗ್ಟಕ್,ಎ.9: ಸಿಕ್ಕಿಂನಲ್ಲಿ ವಲಸಿಗರಿಗೆ ಆದಾಯತೆರಿಗೆ ರಿಯಾಯಿತಿ ನೀಡುವುದನ್ನು ವಿರೋಧಿಸಿ ಸಿಂಗ್ಟಾಮ್ ನಲ್ಲಿ ಜಂಟಿ ಕ್ರಿಯಾ ಸಮಿತಿ ಶನಿವಾರ ನಡೆಸಿದ ರ್‍ಯಾಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ನಗರದಲ್ಲಿ ನಿಷೇಧಾಜ್ಡೆಯನ್ನು ಹೇರಲಾಗಿದೆ. ರ್‍ಯಾಲಿಯಲ್ಲಿ ಅಜ್ಞಾತ ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ಜಂಟಿ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ್ ಸಂಪಕೊಟಾ ಅವರು ಕೂಡಾ ಗಾಯಗೊಂಡಿದ್ದಾರೆ. ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ವ್ಯಕ್ತಿಗಳು ಸಭೆ ಸೇರುವುದನ್ನು ನಿಷೇಧಿಸಲಾಗಿದೆ.
ಸಿಕ್ಕಿಂ ಭಾರತದೊಂದಿಗೆ ವಿಲೀನಗೊಂಡ ದಿನಾಂಕವಾದ 1976ರ ಎಪ್ರಿಲ್ 26ರಂದು ಅಥವಾ ಅದಕ್ಕೆ ಮುನ್ನ ಸಿಕ್ಕಿಂನಲ್ಲಿ ವಾಸವಾಗಿರುವ ಭಾರತೀಯರೆಲ್ಲರೂ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಲು ಅರ್ಹರಾಗಿರುತ್ತಾರೆ ಎಂಬ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಜಂಟಿ ಕ್ರಿಯಾ ಸಮಿತಿ ವಹಿಸಿಕೊಂಡಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (26ಎಎಎ) ರಲ್ಲಿ ಸಿಕ್ಕಿಂ ನಿವಾಸಿಗಳ ಕುರಿತು ಮಾಡಲಾಗಿದ್ದ ವ್ಯಾಖ್ಯಾನವನ್ನು ಪ್ರಶ್ನಿಸಿ ಸಿಕ್ಕಿಂನ ಹಳೆಯ ವಲಸಿಗರ ಸಂಘವು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಸುಪ್ರೀಂಕೋರ್ಟ್ ಈ ಆದೇಶ ನೀಡಿತ್ತು..
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (26ಎಎಎ) ರಲ್ಲಿ ಸಿಕ್ಕಿಂ ನಿವಾಸಿಗಳನ್ನು ಮೂಲ ನಿವಾಸಿಗಳು ಹಾಗೂ ಹಳೆಯ ವಲಸಿಗರೆಂದು ಪ್ರತ್ಯೇಕಿಸಿರುವುದು ತಾರತಮ್ಯದ್ದಾಗಿದೆ ಹಾಗೂ ಸಂವಿಧಾನದತ್ತವಾದ ಸಮಾನತೆಯ ಮೂಲಭೂತ ಹಕ್ಕಿಗೆ ಧಕ್ಕೆಯುಂಟು ಮಾಡಿದೆ ಎಂದು ಸಂಘವು ವಾದಿಸಿತ್ತು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ಸಿಕ್ಕಿಂನಲ್ಲಿ ವಾಸವಾಗಿರುವ ಎಲ್ಲಾ ಭಾರತೀಯ ಪೌರರಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯಬೇಕೆಂದು ಆದೇಶಿಸಿತ್ತು.
ಜಂಟಿ ಕ್ರಿಯಾ ಸಮಿತಿ ರ್‍ಯಾಲಿಯ ಮೇಲೆ ದಾಳಿಗೆ ಸಿಕ್ಕಿಂ ಸರಕಾರವು ಕುಮ್ಮಕ್ಕು ನೀಡಿದೆಯೆಂದು ಸಂಘಟನೆಯ ಉಪಾಧ್ಯಕ್ಷ ಪಸ್ಸಾಂಗ್ ಶೆರ್ಪಾ ಆಪಾದಿಸಿದ್ದಾರೆಂದು ಈಸ್ಟ್ ಮೊಜೊ ವರದಿ ಮಾಡಿದೆ.
‘‘ಸಭೆಯ ಮೇಲೆ ಇಂದು ಯಾವ ರೀತಿಯ ದಾಳಿಯನ್ನು ನಡೆಸಲಾಯಿತೆಂದರೆ, ಅಧಿಕಾರದಲ್ಲಿರು ಪಕ್ಷವು ಜೆಎಸಿಯನ್ನು ಮುಗಿಸಿಬಿಡಲು ಸಂಚುಹೂಡಿದೆ ಎಂದು ಶೆರ್ಪಾ ಆಪಾದಿಸಿದ್ದಾರೆ. ಅವರು ನಮ್ಮ ಸದಸ್ಯರನ್ನು ಕೊಲ್ಲಬಹುದು ಅಥವಾ ಬೇರೇನೆನ್ನಾದರೂ ಮಾಡಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಂಗ್ಟಾಮ್ ನಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜೆಎಸಿಯ ಹಲವಾರು ಸದಸ್ಯರನ್ನು ಬೆನ್ನಟ್ಟಲಾಗಿದೆ ಹಾಗೂ ಅವರಲ್ಲಿ ಹಲವರು ನಾಪತ್ತೆಯಾಗಿದ್ದಾರೆಂದು ಶೆರ್ಪಾ ತಿಳಿಸಿದ್ದಾರೆ.
‘‘ಸಿಕ್ಕಿಂನಲ್ಲಿ ಅರಾಜಕತೆ ತಾಂಡವವಾಡುತ್ತಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಕಾನೂನು ಹಾಗೂ ಸುವ್ಯವಸ್ಥೆ ಈಗ ಆಡಳಿತ ಅಥವಾ ಪೊಲೀಸರ ಜೊತೆಗಿಲ್ಲ. ಅವು ಗೂಂಡಾಗಳ ಪಾಲಾಗಿದೆ. ಸಿಕ್ಕಿಂ ರಾಜ್ಯವನ್ನು ಗೂಂಡಾಗಳು ಆಳುತ್ತಿದಾರೆ’’ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಸಿಂಗ್ಟಾಮ್ ನಲ್ಲಿ ನಡೆದ ಹಿಂಸಾಚಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಹಾಗೂ ಮೂವರನ್ನು ಬಂಧಿಸಲಾಗಿದೆಯೆದಂು ಪೊಲೀಸ್ ಅಧೀಕ್ಷಕ ತೆನ್ಸಿಂಗ್ ಲೊಡೆನ್ ಲೆಪ್ಚಾ ತಿಳಿಸಿದ್ದಾರೆ.







