ಜಾರ್ಖಂಡ್: ಕಳ್ಳನೆಂದು ಶಂಕಿಸಿ ಯುವಕನ ಥಳಿಸಿ ಹತ್ಯೆ

ರಾಂಚಿ, ಎ. 9: ಕಳ್ಳನೆಂದು ಶಂಕಿಸಿ 20 ವರ್ಷದ ಯುವಕನೋರ್ವನನ್ನು ಗ್ರಾಮಸ್ಥರ ಗುಂಪೊಂದು ಥಳಿಸಿ ಹತ್ಯೆಗೈದ ಆಘಾತಕಾರಿ ಘಟನೆ ರಾಂಚಿ ಜಿಲ್ಲೆಯ ಚನ್ಹೋ ಬ್ಲಾಕ್ ನಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ವಾಜಿದ್ ಅನ್ಸಾರಿ ಎಂದು ಗುರುತಿಸಲಾಗಿದೆ. ಈತ ರಾಂಚಿ ಜಿಲ್ಲೆಯ ಚನ್ಹೋ ಬ್ಲಾಕ್ ನ ನಿವಾಸಿ.
ಕಳ್ಳನೆಂದು ಶಂಕಿಸಿ ಪಂಡ್ರಿಯ ಗ್ರಾಮಸ್ಥರು ಈತನನ್ನು ಶುಕ್ರವಾರ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನ್ಸಾರಿ ಕಳವುಗೈಯುವ ಉದ್ದೇಶದಿಂದ ಇತರರೊಂದಿಗೆ ಶುಕ್ರವಾರ ಬೆಳಗ್ಗೆ ಜೀವನ್ ಒರಾನ್ ಅವರ ಮನೆ ಪ್ರವೇಶಿಸಿದ್ದಾನೆ. ಈ ಸಂದರ್ಭ ಜೀವನ್ ಒರಾನ್ ಎದ್ದು ಬೊಬ್ಬೆ ಹೊಡೆದಿದ್ದಾನೆ.
ಬೊಬ್ಬೆ ಕೇಳಿ ಗ್ರಾಮಸ್ಥರು ಸೇರಿ ವಾಜಿದ್ ನನ್ನು ಸೆರೆ ಹಿಡಿದಿದ್ದಾರೆ ಹಾಗೂ ಕಟ್ಟಿ ಹಾಕಿ ಥಳಿಸಿದ್ದಾರೆ. ವಾಜಿದ್ ನ ಜೊತೆಗಿದ್ದವರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ನೌಶದ್ ಅಲಾಂ ತಿಳಿಸಿದ್ದಾರೆ. ಆದರೆ ಕಳವು ಆರೋಪವನ್ನು ವಾಜಿದ್ ಅನ್ಸಾರಿಯ ತಂದೆ ಅಬ್ದುಲ್ ರೆಹ್ಮಾನ್ ಅನ್ಸಾರಿ ನಿರಾಕರಿಸಿದ್ದಾರೆ. ತನ್ನ ಪುತ್ರ ಗಾಂಜಾ ಸೇದುತ್ತಾನೆ. ಆದರೆ, ಎಂದಿಗೂ ಕಳವುಗೈಯಲಾರ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಕುರಿತು ಅಬ್ದುಲ್ ರೆಹ್ಮಾನ್ ಅನ್ಸಾರಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.







