ಇಸ್ರೇಲ್ ನತ್ತ ಸಿರಿಯಾ ರಾಕೆಟ್ ದಾಳಿ

ಜೆರುಸಲೇಂ, ಎ.9: ಇಸ್ರೇಲ್-ಫೆಲೆಸ್ತೀನ್ ನಡುವಿನ ಉದ್ವಿಗ್ನತೆ ಹೆಚ್ಚಿರುವಂತೆಯೇ ಪೊಲೀಸ್ ಮತ್ತು ಸೇನೆಯ ಮೀಸಲು ಪಡೆಯನ್ನು ಸಜ್ಜುಗೊಳಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಿದ ಬಳಿಕ ಸಿರಿಯಾದ ಪ್ರದೇಶದಿಂದ ಇಸ್ರೇಲ್ ನತ್ತ ರಾಕೆಟ್ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಸಂಯಮ ವಹಿಸುವಂತೆ ಅಂತರಾಷ್ಟ್ರೀಯ ಸಮುದಾಯದ ಮನವಿಯ ಹೊರತಾಗಿಯೂ, ಕಳೆದ ಬುಧವಾರ ಇಸ್ರೇಲಿ ಪೊಲೀಸರು ಬಲಪ್ರಯೋಗಿಸಿ ಅಲ್-ಅಕ್ಸಾ ಮಸೀದಿಯೊಳಗೆ ಪ್ರವೇಶಿಸಿ ಫೆಲೆಸ್ತೀನೀಯರ ವಿರುದ್ಧ ಕಾರ್ಯಾಚರಣೆ ನಡೆಸಿದ ಬಳಿಕ ಜೆರುಸಲೇಂ ಮತ್ತು ವೆಸ್ಟ್‌ಬ್ಯಾಂಕ್, ಗಾಝಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಫೆಲೆಸ್ತೀನೀಯರ ಸಶಸ್ತ್ರ ಹೋರಾಟಗಾರರ ಪಡೆ ಇಸ್ರೇಲ್ ನತ್ತ ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಗಾಝಾ ಮತ್ತು ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸಿತ್ತು.
ಈ ಮಧ್ಯೆ, ಶನಿವಾರ ತಡರಾತ್ರಿ ಸಿರಿಯಾ 3 ರಾಕೆಟ್ ಗಳನ್ನು ಪ್ರಯೋಗಿಸಿದ್ದು ಇವು ದಕ್ಷಿಣ ಗೊಲಾನ್ಹೈಟ್ಸ್ ಪ್ರದೇಶದ ಬಯಲು ಪ್ರದೇಶಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಹೇಳಿದೆ.