ಪಾಕ್ ಪ್ರಧಾನಿಯ ನಿವಾಸಕ್ಕೆ ನುಸುಳಿದ ವ್ಯಕ್ತಿಯ ಬಂಧನ

ಇಸ್ಲಮಾಬಾದ್, ಎ.9: ಸಂಶಯಾಸ್ಪದ ವ್ಯಕ್ತಿಯೊಬ್ಬ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಅವರ ಮನೆಗೆ ನುಸುಳಿದ್ದು ಆತನನ್ನು ಬಳಿಕ ಬಂಧಿಸಿ ವಿಚಾರಣೆಗಾಗಿ ಭಯೋತ್ಪಾದನಾ ನಿಗ್ರಹ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ಜಿಯೊ ನ್ಯೂಸ್' ವರದಿ ಮಾಡಿದೆ.
ಆರೋಪಿ ಅಫ್ಘಾನಿಸ್ತಾನದ ಪ್ರಜೆಯಾಗಿರುವ ಶಂಕೆಯಿದೆ. ಈತ ಮೂರು ವಿಭಿನ್ನ ಮಾರ್ಗಗಳ ಮೂಲಕ ಪ್ರಧಾನಿ ನಿವಾಸದೊಳಗೆ ಪ್ರವೇಶಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತನನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು ಪ್ರಧಾನಿಯ ನಿವಾಸಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಶಂಕಿತ ವ್ಯಕ್ತಿ ಭದ್ರತಾ ಪಡೆಯ ಕಣ್ತಪ್ಪಿಸಿ ಹೇಗೆ ಒಳನುಸುಳಿದ್ದಾನೆ ಎಂದು ಪತ್ತೆಹಚ್ಚಲು ಸ್ಥಳದಲ್ಲಿರುವ ಸಿಸಿಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿ ಹೇಳಿದೆ.
Next Story