ತೈವಾನ್ ಮೇಲೆ ಅಣಕುದಾಳಿಯ ಕಾರ್ಯಾಚರಣೆ ನಡೆಸಿದ ಚೀನಾ

ತೈಪೆ, ಎ.9: ತೈವಾನ್ ಅನ್ನು ಸುತ್ತುವರಿದು ಮಿಲಿಟರಿ ಕವಾಯತು ಆರಂಭಿಸಿರುವ ಚೀನಾ, ಎರಡನೇ ದಿನವಾದ ರವಿವಾರ ತೈವಾನ್ ಮೇಲಿನ ಅಣಕುದಾಳಿಯ ಮೂಲಕ ಸಮರಾಭ್ಯಾಸವನ್ನು ಮುಂದುವರಿಸಿದೆ ಎಂದು ವರದಿಯಾಗಿದೆ.
ಚೀನಾದ ಉಗ್ರ ಸಮರಾಭ್ಯಾಸಕ್ಕೆ ತೈವಾನ್ನಿಂದ ಖಂಡನೆ ವ್ಯಕ್ತವಾಗಿದ್ದರೆ ಚೀನಾದ ಚಟುವಟಿಕೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಆದರೆ ಮೂರು ದಿನಗಳ ಸಮರಾಭ್ಯಾಸ ಪೂರ್ವನಿಗದಿತ ರೀತಿಯಲ್ಲಿಯೇ ಮುಂದುವರಿಯಲಿದೆ ಎಂದು ಚೀನಾದ ಸೇನೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದೆ.
ದ್ವೀಪದ ಸುತ್ತ ಚೀನಾದ 11 ಸಮರನೌಕೆಗಳು ಹಾಗೂ 70 ಯುದ್ಧವಿಮಾನಗಳನ್ನು ಪತ್ತೆಹಚ್ಚಲಾಗಿದೆ ಎಂದು ತೈವಾನ್ನ ರಕ್ಷಣಾ ಸಚಿವಾಲಯ ಹೇಳಿದೆ.
ಎರಡನೇ ದಿನದ ಸಮರಾಭ್ಯಾಸದಲ್ಲಿ ತೈವಾನ್ ಜಲಸಂಧಿಯಲ್ಲಿ ತೈವಾನ್ ದ್ವೀಪ ಮತ್ತು ಸುತ್ತಮುತ್ತಲಿನ ಸಾಗರದಲ್ಲಿನ ಪ್ರಮುಖ ಗುರಿಗಳ ಮೇಲೆ ಅಣಕು ದಾಳಿಯನ್ನು ನಡೆಸಿವೆ. ದ್ವೀಪವನ್ನು ನಿಕಟವಾಗಿ ಸುತ್ತುವರಿಯುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಚೀನಾ ಸೇನೆ ಹೇಳಿದೆ. ಸೋಮವಾರದ ಸಮರಾಭ್ಯಾಸವು ತೈವಾನ್ನ ಮಾತ್ಸು ದ್ವೀಪದ ಸುಮಾರು 80 ಕಿ.ಮೀ ದೂರದಲ್ಲಿರುವ ಫುಜಿಯಾನ್ ಪ್ರಾಂತದಲ್ಲಿ ನಡೆಯಲಿದೆ.
ಈ ಸಮರಾಭ್ಯಾಸವು ತೈವಾನ್ನ ಸ್ವಾತಂತ್ರ್ಯ ಬಯಸುವ ಪ್ರತ್ಯೇಕತಾವಾದಿ ಶಕ್ತಿಗಳು ಮತ್ತು ಬಾಹ್ಯಶಕ್ತಿಗಳ ನಡುವಿನ ಒಪ್ಪಂದ ಹಾಗೂ ಅವರ ಪ್ರಚೋದನಕಾರಿ ಚಟುವಟಿಕೆಗಳ ವಿರುದ್ಧ ಕಠಿಣ ಎಚ್ಚರಿಕೆಯಾಗಲಿದೆ ಎಂದು ಚೀನಾ ಸೇನೆಯ ವಕ್ತಾರ ಶಿ ಯಿನ್ ಹೇಳಿದ್ದಾರೆ.