‘ಅಗ್ನಿಪಥ್’ ಯೋಜನೆ: ದಿಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವ ಅರ್ಜಿಗಳನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಎ. 10: ಕೇಂದ್ರ ಸರಕಾರದ ‘ಅಗ್ನಿಪಥ’ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿಕೊಳ್ಳಲಾಗುತ್ತಿರುವ ನೇಮಕಾತಿಗಳಿಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
‘ಅಗ್ನಿಪಥ’ ಯೋಜನೆಯಡಿ ಸಶಸ್ತ್ರ ಪಡೆಗಳಿಗೆ 17.5 ಮತ್ತು 21 ವರ್ಷಗಳ ನಡುವಿನ ನಾಗರಿಕರನ್ನು ನಾಲ್ಕು ವರ್ಷಗಳ ಅವಧಿಗಾಗಿ ನೇಮಿಸಲಾಗುತ್ತದೆ ಹಾಗೂ ಅವರ ಪೈಕಿ 25% ಮಂದಿಯನ್ನು 15 ವರ್ಷಗಳ ಹೆಚ್ಚುವರಿ ಅವಧಿಗಾಗಿ ಸೇನೆಯಲ್ಲೇ ಉಳಿಸಿಕೊಳ್ಳಲಾಗುತ್ತದೆ.
ಈ ಯೋಜನೆಗೆ ಹಲವು ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಪಿಂಚಣಿ ಸೌಲಭ್ಯ ನೀಡುವುದು ಸೇರಿದಂತೆ ಪೂರ್ಣಾವಧಿಗಾಗಿ ನೇಮಕಾತಿ ಮಾಡಿಕೊಳ್ಳುವಂತೆ ಪ್ರತಿಭಟನಕಾರರು ಸರಕಾರವನ್ನು ಒತ್ತಾಯಿಸಿದ್ದರು.
ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಮೊದಲ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸುವುದಾಗಿ ಸರಕಾರ ಭರವಸೆ ನೀಡಿತ್ತು.
ಸೇನೆಗೆ ಕಿರು ಅವಧಿಗಾಗಿ ಮಾಡಿಕೊಳ್ಳುವ ನೇಮಕಾತಿಗಳ ಸಂವಿಧಾನ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಫೆಬ್ರವರಿಯಲ್ಲಿ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು ಹಾಗೂ ಸರಕಾರದ ನಿಲುವನ್ನು ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಪೈಕಿ ಒಂದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿತು ಹಾಗೂ ಅದನ್ನು ವಜಾಗೊಳಿಸಿತು. ಹೈಕೊರ್ಟ್ ಎಲ್ಲಾ ಅಂಶಗಳನ್ನು ಸರಿಯಾಗಿ ಪರಿಗಣಿಸಿಯೇ ತೀರ್ಪು ನೀಡಿದೆ ಎಂದು ಅದು ಹೇಳಿತು.
ಭಾರತೀಯ ಸೇನೆ ಮತ್ತು ಭಾರತೀಯ ವಾಯು ಪಡೆ ಆರಂಭಿಸಿದ್ದ, ಆದರೆ ಅಗ್ನಿಪಥ ಯೋಜನೆಯ ಬಳಿಕ ನಿಲ್ಲಿಸಲಾಗಿರುವ ಸೈನಿಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ದೇಶನಗಳನ್ನು ನೀಡುವಂತೆ ಇನ್ನೊಂದು ಅರ್ಜಿಯು ಸುಪ್ರೀಂ ಕೋರ್ಟನ್ನು ಕೋರಿತ್ತು.
ಎರಡನೇ ಅರ್ಜಿಯನ್ನು ಸಲ್ಲಿಸಿದವರ ಪರವಾಗಿ ಹಾಜರಾದ ವಕೀಲ ಅರುಣವ ಮುಖರ್ಜಿ, ತನ್ನ ಕಕ್ಷಿಗಾರನು ‘ಅಗ್ನಿಪಥ’ ಯೋಜನಯ ಸಿಂಧುತ್ವವನ್ನು ಸಾರಾಸಗಟಾಗಿ ಪ್ರಶ್ನಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದರು. ಜೂನ್ ನಲ್ಲಿ ಅಗ್ನಿಪಥ ಯೋಜನೆಯನ್ನು ಘೋಷಿಸುವ ಮೊದಲು, ಸೇನೆ ಮತ್ತು ವಾಯು ಪಡೆಗೆ ಹಿಂದಿನ ವಿಧಾನಗಳ ಮೂಲಕ ಮಾಡಬೇಕಾಗಿದ್ದ ನೇಮಕಾತಿಯನ್ನು ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಲವು ಬಾರಿ ಮುಂದೂಡಲಾಗಿತ್ತು ಎನ್ನುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಹಿಂದಿನ ನೇಮಕಾತಿ ವಿಧಾನಗಳಡಿಯ ಪರೀಕ್ಷೆಗಳನ್ನು ರದ್ದುಪಡಿಸಲಾಗಿಲ್ಲ, ಮುಂದೂಡಲಾಗಿದೆಯಷ್ಟೆ ಎಂದು ವಕೀಲರು ಹೇಳಿದರು.
ಆದರೆ, ಹಿಂದಿನ ನೇಮಕಾತಿ ವಿಧಾನದಲ್ಲಿ ಪಾಲ್ಗೊಂಡಿದ್ದವರಿಗೆ ‘‘ಸ್ಥಾಪಿತ ಹಕ್ಕು’’ಗಳೇನೂ ಇಲ್ಲ ಎಂದು ಮೂವರು ಸದಸ್ಯರ ನ್ಯಾಯಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟರು.
‘‘ಹಿಂದಿನ ವಿಧಾನದಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ, ಆದರೆ ಪ್ರವೇಶ ಪರೀಕ್ಷೆ ಆಗಿಲ್ಲ’’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. ‘‘ಆಗ ನೂತನ ಯೋಜನೆ ಬಂತು. ಹಿಂದಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವುದು ಬೇಡ ಎಂಬ ನಿರ್ಧಾರಕ್ಕೆ ಅವರು (ಸರಕಾರ) ಬಂದರು’’ ಎಂದರು.
ಅಗ್ನಿಪಥ ಯೋಜನೆಯು ಜಾರಿಗೆ ಬರುವುದಕ್ಕೂ ಮೊದಲು ಆರಂಭಿಸಲಾಗಿದ್ದ ಭಾರತೀಯ ವಾಯು ಪಡೆ ನೇಮಕಾತಿಗೆ ಸಂಬಂಧಿಸಿದ ಮೂರನೇ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಪೀಠವು, ಹಿಂದಿನ ವಿಧಾನವನ್ನು ಸಂಪೂರ್ಣಗೊಳಿಸದೆ ಇರುವಲ್ಲಿ ಸ್ವೇಚ್ಛಾಚಾರ ಏನೂ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಆದರೂ, ಈ ಅರ್ಜಿಯ ವಿಚಾರಣೆಯನ್ನು ಎಪ್ರಿಲ್ 17ರಂದು ಮತ್ತೊಮ್ಮೆ ನಡೆಸಲು ನ್ಯಾಯಾಲಯ ನಿರ್ಧರಿಸಿತು.