ಇಂಡಿಯನ್ ಸೋಷಿಯಲ್ ಸೈನ್ಸ್ ಅಕಾಡೆಮಿ ಅಧ್ಯಕ್ಷರಾಗಿ ಪ್ರೊ. ಮುಝಫ್ಫರ್ ಅಸಾದಿ ಆಯ್ಕೆ

ಮಂಗಳೂರು: ಮೈಸೂರು ವಿವಿಯ ಮಾಜಿ ಪ್ರಭಾರಿ ಕುಲಪತಿ ಹಾಗೂ ಹಾಲಿ ಕಲಾ ವಿಭಾಗದ ಡೀನ್ ಮತ್ತು ಅತ್ಯಂತ ಹಿರಿಯ ಪ್ರೊಫೆಸರ್ ಆಗಿರುವ ಮುಝಫ್ಫರ್ ಅಸಾದಿ ಅವರು 2023-2024ನೇ ಸಾಲಿಗೆ ಇಂಡಿಯನ್ ಸೋಷಿಯಲ್ ಸೈನ್ಸ್ ಅಕಾಡೆಮಿ (ISSA)ಯ ನಿಯೋಜಿತ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಹಿಂದೆ ಅದರ ಉಪಾಧ್ಯಕ್ಷರಾಗಿದ್ದರು.
ಐಎಸ್ಎಸ್ಎ 1974ರಲ್ಲಿ ಸ್ಥಾಪನೆಗೊಂಡಿತ್ತು. ಭಾರತದ ನಿರ್ದಿಷ್ಟ ಸಂದರ್ಭಗಳಿಗೆ ಸಂಬಂಧಿಸಿದಂತೆ ಮನುಷ್ಯ,ಸಮಾಜ ಮತ್ತು ಪ್ರಕೃತಿಯ ಕುರಿತು ವೈಜ್ಞಾನಿಕ ಮಾಹಿತಿಯ ಮೌಲ್ಯಮಾಪನ, ಸಂಯೋಜನೆ ಮತ್ತು ಪ್ರಸಾರದ ಜೊತೆಗೆ ಸಾಮಾಜಿಕ ವಿಜ್ಞಾನಗಳು, ನೈಸರ್ಗಿಕ ವಿಜ್ಞಾನಗಳು ಮತ್ತು ತಂತ್ರಜ್ಞಾನದ ನಡುವೆ ಸಾಮರಸ್ಯವನ್ನು ಹೆಚ್ಚಿಸುವ ಗುರಿಯನ್ನು ಐಎಸ್ಎಸ್ಎ ಹೊಂದಿದೆ. ಅದು ವಿಜ್ಞಾನವನ್ನು ಸಾಮಾಜಿಕ ಎಂದು ವ್ಯಾಖ್ಯಾನಿಸುವ ಹಾಗೂ ಪ್ರಕೃತಿ, ಸಾಮಾಜಿಕ ಮತ್ತು ವರ್ತನೆಗಳ ವಿಜ್ಞಾನಗಳ ಎಲ್ಲ ಕ್ಷೇತ್ರಗಳನ್ನು ಒಳಗೊಂಡಿರುವ ವಿಶ್ವದ ಏಕೈಕ ಸಂಸ್ಥೆಯಾಗಿದೆ.
ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಪ್ರೊ.ವಿ.ಕೆ.ಆರ್.ವಿ.ರಾವ್, ಖ್ಯಾತ ಸಮಾಜ ವಿಜ್ಞಾನಿ ಎಂ.ಎಸ್.ಗೋರೆ ಮುಂತಾದವರು ಈ ಹಿಂದೆ ಐಎಸ್ಎಸ್ಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರೊ.ಅಸಾದಿ ಅವರು ಉಡುಪಿ ತಾಲೂಕು ಶಿರ್ವ ಮೂಲದವರಾಗಿದ್ದು, ಅಲ್ಲಿಯ ಸೈಂಟ್ ಮೇರಿಸ್ ಇನಸ್ಟಿಟ್ಯೂಷನ್ಸ್ ಮತ್ತು ಹಿಂದು ಹೈಯರ್ ಎಲಿಮೆಂಟರಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರು ವಿವಿ,ದಿಲ್ಲಿಯ ಜೆಎನ್ಯು ಮತ್ತು ಚಿಕಾಗೋ ವಿವಿಗಳಿಂದ ಅವರು ಪದವಿಗಳನ್ನು ಪಡೆದಿದ್ದಾರೆ.







