ಪೆಗಾಸಸ್ ಮಾದರಿಯ ಇನ್ನೊಂದು ಬೇಹುಗಾರಿಕಾ ಸಾಫ್ಟ್‌ವೇರ್ ಖರೀದಿಗೆ ಮುಂದಾದ ಸರಕಾರ: ಕಾಂಗ್ರೆಸ್

ಹೊಸದಿಲ್ಲಿ, ಎ. 10: ಕೇಂದ್ರ ಸರಕಾರವು ‘ಕಾಗ್ನೈಟ್’ ಎಂಬ ಪೆಗಾಸಸ್ ಮಾದರಿಯ ಬೇಹುಗಾರಿಕಾ ಸಾಫ್ಟ್ವೇರನ್ನು 986 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ ಹಾಗೂ ರಾಜಕಾರಣಿಗಳು, ಮಾಧ್ಯಮಗಳು, ಸಾಮಾಜಿಕ ಹೋರಾಟಗಾರರು ಮತ್ತು ಎನ್ಜಿಒಗಳ ಮೇಲೆ ಬೇಹುಗಾರಿಕೆ ನಡೆಸಲು ಅದನ್ನು ಬಳಸಲಾಗುವುದು ಎಂದು ಆರೋಪಿಸಿದೆ.
‘‘ಪೆಗಾಸಸ್ ಕುಖ್ಯಾತಿ ಗಳಿಸಿದ ಬಳಿಕ, ‘ಕನಿಷ್ಠ ಆಡಳಿತ-ಗರಿಷ್ಠ ಬೇಹುಗಾರಿಕೆ’ಯ ಸರಕಾರವು ಮಾರುಕಟ್ಟೆಯಲ್ಲಿ ನೂತನ ಬೇಹುಗಾರಿಕಾ ಸಾಫ್ಟ್ವೇರ್ ಗಾಗಿ ಹುಡುಕಾಡುತ್ತಿದೆ’’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ ಹೇಳಿದರು.
‘‘ಆಡಳಿತಾರೂಢ ವ್ಯವಸ್ಥೆಯು ಪ್ರತಿಪಕ್ಷಗಳನ್ನು ದ್ವೇಷಿಸುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಅವರು ತಮ್ಮದೇ ಸಚಿವರ ಮೇಲೆ ಬೇಹುಗಾರಿಕಾ ಸಾಫ್ಟ್ವೇರ್ ಬಳಸಿದ್ದಾರೆ’’ ಎಂದು ಖೇರಾ ಆರೋಪಿಸಿದರು.
‘‘ಈ ದೇಶದ ‘ಇಬ್ಬರು ಬೇಹುಗಾರರು’ ಯಾರನ್ನೂ ನಂಬುವುದಿಲ್ಲ, ಕಾನೂನು ಅಥವಾ ಮಾಧ್ಯಮವನ್ನೂ ಕೂಡ. ಹಾಗಾಗಿ, ಬೇಹುಗಾರಿಕೆ ಸಾಫ್ಟ್ವೇರ್ ಮತ್ತು ಇಸ್ರೇಲಿ ತಂತ್ರಜ್ಞಾನವನ್ನು ಖರೀದಿಸುವುದಕ್ಕಾಗಿ ಅವರು ತೆರಿಗೆದಾರರ ನೂರಾರು ಕೋಟಿ ರೂಪಾಯಿ ಹಣವನ್ನು ವ್ಯಯಿಸುತ್ತಿದ್ದಾರೆ. ನಮ್ಮ ಸತ್ಯಗಳಿಂದ ತನ್ನ ಪೊಳ್ಳು ಅರಮನೆ ಕುಸಿಯಬಹುದು ಎಂಬ ಹೆದರಿಕೆ ದೊರೆಗೆ ಇರುವುದರಿಂದ ಅವರು ಹೀಗೆ ಮಾಡುತ್ತಿದ್ದಾರೆ’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.







