ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲ್ ವಸಾಹತುಗಾರರ ರ್ಯಾಲಿ: ಸೇನೆಯ ಗುಂಡೇಟಿಗೆ ಫೆಲೆಸ್ತೀನ್ ಬಾಲಕ ಬಲಿ

ಜೆರುಸಲೇಂ, ಎ.10: ಆಕ್ರಮಿತ ವೆಸ್ಟ್ಬ್ಯಾಂಕ್ ನಲ್ಲಿ ಯಹೂದಿ ವಸಾಹತುಗಾರರ ವಸಾಹತು ಮರುಸ್ಥಾಪನೆ ಮತ್ತು ಅದನ್ನು ಕಾನೂನುಬದ್ಧಗೊಳಿಸುವಂತೆ ಆಗ್ರಹಿಸಿ ಉತ್ತರ ವೆಸ್ಟ್ಬ್ಯಾಂಕ್ ನ ಅನಧಿಕೃತ ವಸಾಹತುನೆಲೆಗೆ ನಡೆದ ರ್ಯಾಲಿಯಲ್ಲಿ ಕನಿಷ್ಟ 7 ಕ್ಯಾಬಿನೆಟ್ ಸಚಿವರ ನೇತೃತ್ವದಲ್ಲಿ ಸಾವಿರಾರು ಇಸ್ರೇಲಿಯನ್ನರು ಪಾಲ್ಗೊಂಡಿರುವುದಾಗಿ ವರದಿಯಾಗಿದೆ.
ಈ ಸಂದರ್ಭ ರ್ಯಾಲಿಗೆ ಭದ್ರತೆ ಒದಗಿಸಲು ನಿಯೋಜಿಸಿದ್ದ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಫೆಲೆಸ್ತೀನ್ನ 15 ವರ್ಷದ ಬಾಲಕ ಮುಹಮ್ಮದ್ ಬಲ್ಹಾನ್ ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ. ಎವ್ಯಾತರ್ ವಸಾಹತು ನೆಲೆಯನ್ನು 2021ರಲ್ಲಿ ಇಸ್ರೇಲ್ ಸರಕಾರ ತೆರವುಗೊಳಿಸಿತ್ತು. ಅಂದಿನಿಂದ ಎವ್ಯಾತರ್ಗೆ ಭೇಟಿ ನೀಡುವುದನ್ನು ಸೇನೆಯು ಅಧಿಕೃತವಾಗಿ ನಿಷೇಧಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಈ ನಿಷೇಧವನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ. ಸೋಮವಾರ ನಡೆದ ರ್ಯಾಲಿಗೆ ಸೇನೆಯು ಅನುಮೋದನೆ ನೀಡಿದೆ ಮತ್ತು ಈ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಸೇನೆಯ ವಕ್ತಾರ ಲೆ|ಕ| ರಿಚರ್ಡ್ ಹೆಚ್ಟ್ ಹೇಳಿದ್ದರು.
ಇಸ್ರೇಲ್ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಕಟ್ಟಾ ಬಲಪಂಥೀಯ ಸರಕಾರವು ಅಂತಾರಾಷ್ಟ್ರೀಯ ವಿರೋಧದ ಹೊರತಾಗಿಯೂ ಆಕ್ರಮಿತ ಭೂಮಿಯಲ್ಲಿ ವಸಾಹತು ನಿರ್ಮಾಣವನ್ನು ವೇಗಗೊಳಿಸಲು ನಿರ್ಧರಿಸಿರುವುದಕ್ಕೆ ಈ ವಿದ್ಯಮಾನ ಸಾಕ್ಷಿಯಾಗಿದೆ. `ರ್ಯಾಲಿಯನ್ನು ರದ್ದುಗೊಳಿಸಲು ಯಾವುದೇ ಕಾರಣಗಳಿಲ್ಲ. ನಾವು ಇಲ್ಲಿಯೇ ನೆಲೆಯಾಗಲಿದ್ದೇವೆ ಎಂಬ ಬಲಿಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಬೇಕಿದೆ' ಎಂದು ಇಸ್ರೇಲ್ ಸಂಸದ ಒಹಾದ್ ತಾಲ್ ಹೇಳಿದ್ದಾರೆ.
ಜೆರುಸಲೇಂನಲ್ಲಿ ಮುಂದುವರಿದ ಹಿಂಸಾಚಾರ ಹಾಗೂ ಇಸ್ರೇಲ್ನ ಉತ್ತರ ಮತ್ತು ದಕ್ಷಿಣ ಗಡಿಭಾಗದಲ್ಲಿ ಘರ್ಷಣೆ ಭುಗಿಲೆದ್ದಿರುವ ಸಂದರ್ಭದಲ್ಲೇ ಹಮ್ಮಿಕೊಂಡಿರುವ ಈ ರ್ಯಾಲಿಗೆ ಭದ್ರತೆ ಒದಗಿಸಲು ಇಸ್ರೇಲ್ ಸರಕಾರ ಪೊಲೀಸ್ ಪಡೆ ಹಾಗೂ ಸೇನಾ ಸಿಬಂದಿಯನ್ನು ನಿಯೋಜಿಸಿತ್ತು. ಈ ರ್ಯಾಲಿಯು ಜೆರುಸಲೇಂ ಮತ್ತು ಆಕ್ರಮಿತ ವೆಸ್ಟ್ಬ್ಯಾಂಕ್ ನಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಲಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ವೆಸ್ಟ್‌ಬ್ಯಾಂಕ್ ನಲ್ಲಿನ ಜೆರಿಚೊದ ಬಳಿಯಿರುವ ಅಖಾಬತ್ ಜಬರ್ ನಿರಾಶ್ರಿತರ ಶಿಬಿರದ ಬಳಿ ತನ್ನ ಪಡೆ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಜೆರುಸಲೇಂನ ಬೆಟ್ಟದ ಮೇಲಿರುವ ದೇವಾಲಯವು ಇಸ್ರೇಲಿ-ಫೆಲೆಸ್ತೀನ್ ಸಂಘರ್ಷದ ಭಾವನಾತ್ಮಕ ಕೇಂದ್ರವಾಗಿದೆ. ಇಲ್ಲಿ ಮುಸ್ಲಿಮರ ಪವಿತ್ರ ಮಸೀದಿ ಅಲ್-ಅಕ್ಸಾ ಮತ್ತು ಯೆಹೂದಿಗಳ ಪವಿತ್ರ ಸ್ಥಳ `ಟೆಂಪಲ್ ಮೌಂಟ್' ಎರಡೂ ಇವೆ.
ಈ ಮಧ್ಯೆ, ಸೋಮವಾರ ಹಲವು ಯೆಹೂದಿ ಸಂದರ್ಶಕರು ಇಸ್ರೇಲಿ ಪೊಲೀಸರ ಭದ್ರತೆಯೊಂದಿಗೆ ಸೋಮವಾರ ಈ ಸ್ಥಳವನ್ನು ಪ್ರವೇಶಿಸಿದರು. ಧಾರ್ಮಿಕ ಮತ್ತು ರಾಷ್ಟ್ರೀಯತಾವಾದಿ ಯೆಹೂದಿಗಳ ಈ ಪ್ರವಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ ಈ ಸ್ಥಳವನ್ನು ಇಸ್ರೇಲ್ ವಿಭಜಿಸಬಹುದು ಎಂಬ ಆತಂಕ ಫೆಲೆಸ್ತೀನೀಯರಲ್ಲಿದೆ. ಮುಸ್ಲಿಮ್ ಆಡಳಿತದ ದೇವಾಲಯದಲ್ಲಿ ಯೆಹೂದಿಗಳಿಗೆ ಪೂಜೆಗೆ ಅವಕಾಶ ನೀಡದೆ ಸಂದರ್ಶನಕ್ಕೆ ಅನುಮತಿ ನೀಡುವ ದೀರ್ಘಕಾಲದ ವ್ಯವಸ್ಥೆಯನ್ನು ಬದಲಾಯಿಸುವ ಯಾವುದೇ ಉದ್ದೇಶವಿಲ್ಲ ಎಂದು ಇಸ್ರೇಲ್ ಒತ್ತಿಹೇಳಿದೆ.







