ಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹ ಪಕ್ಷವಿರೋಧಿ ಚಟುವಟಿಕೆ: ಕಾಂಗ್ರೆಸ್

ಜೈಪುರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಷಾಮೀಲಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಕಾಂಗ್ರೆಸ್ ಪರಿಗಣಿಸಿದೆ.
ಪೈಲಟ್ ಅವರ ಆರೋಪವನ್ನು ಗೆಹ್ಲೋಟ್ ಸರ್ಕಾರ ಅಲ್ಲಗಳೆದಿದ್ದು, ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಕಾಂಗ್ರೆಸ್ ಪಕ್ಷದೊಳಗಿನ ಸಂಘರ್ಷ ತಾರಕಕ್ಕೇರಿದೆ.
"ಸಚಿನ್ ಪೈಲಟ್ ಅವರು ಮಂಗಳವಾರ ನಡೆಸಲು ಉದ್ದೇಶಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹ ಪಕ್ಷದ ಹಿತಾಸಕ್ತಿಗೆ ವಿರುದ್ಧವಾದದ್ದು. ತಮ್ಮದೇ ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮೂಲಕ ಚರ್ಚಿಸುವ ಬದಲು ಪಕ್ಷದ ವೇದಿಕೆಯಲ್ಲಿ ಇದನ್ನು ಚರ್ಚಿಸಬಹುದು" ಎಂದು ಕಾಂಗ್ರೆಸ್ ಪಕ್ಷದ ರಾಜಸ್ತಾನ ಉಸ್ತುವಾರಿ ಸುಖಜೀಂದರ್ ಸಿಂಗ್ ರಂಧಾವ ಹೇಳಿದ್ದಾರೆ. ಸುಧೀರ್ಘ ಅವಧಿಗೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಪೈಲಟ್ ಮತ್ತು ಹಾಲಿ ಸಿಎಂ ಗೆಹ್ಲೋಟ್ ಬಣಗಳ ನಡುವಿನ ಸಂಘರ್ಷ ಶಮನಕ್ಕೆ ಪಕ್ಷದ ಹಂತದಲ್ಲಿ ಕೊನೆಕ್ಷಣದ ಪ್ರಯತ್ನಗಳು ನಡೆಯುತ್ತಿವೆ.
"ನಾನು ಐದು ತಿಂಗಳಿಂದ ಉಸ್ತುವಾರಿ ಜವಾಬ್ದಾರಿ ಹೊಂದಿದ್ದೇನೆ. ಆದರೆ ಪೈಲಟ್ ಈ ವಿಚಾರವನ್ನು ನನ್ನೊಂದಿಗೆ ಚರ್ಚಿಸಿಲ್ಲ. ನಾನು ಅವರಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆದ್ದರಿಂದ ಈಗಲೂ ತಣ್ಣಗಿರುವಂತೆ ಅವರಿಗೆ ಮನವಿ ಮಾಡುತ್ತಿದ್ದೇನೆ. ಏಕೆಂದರೆ ಅವರು ಕಾಂಗ್ರೆಸ್ ಪಕ್ಷದ ಆಸ್ತಿ ಎನ್ನುವುದು ನಿಸ್ಸಂದೇಹ" ಎಂದು ರಂಧಾವಾಲಾ ಅಭಿಪ್ರಾಯಪಟ್ಟರು.
ಭ್ರಷ್ಟರ ವಿರುದ್ಧ ಕ್ರಮಕ್ಕೆ ಪೈಲಟ್ ಒತ್ತಾಯಿಸುತ್ತಿದ್ದರೂ, ಗೆಹ್ಲೋಟ್ ಸರ್ಕಾರದ ನಡುವಿನ ಇತ್ತೀಚಿನ ಈ ಸಂಘರ್ಷವು, ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕತ್ವದ ಮೇಲೆ ಒತ್ತಡ ತರುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.







