ಅಮುಲ್-ನಂದಿನಿ ವಿವಾದ ಕಾಂಗ್ರೆಸ್-ಜೆಡಿಎಸ್‌ನ ಟೂಲ್‌ಕಿಟ್: ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ ಬ್ರಾಂಡ್ ಆಗಿರುವ ನಂದಿನಿ, ಗುಜರಾತ್ ಮೂಲದ ಹೈನುಗಾರಿಕಾ ಸಹಕಾರ ಸಂಸ್ಥೆ ಅಮುಲ್ ಜತೆ ವಿಲೀನವಾಗಲಿದೆ ಎಂಬ ವದಂತಿಗಳ ಬೆನ್ನಲ್ಲೇ, "ಇದು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸುಳ್ಳು ಪ್ರಚಾರದ ಭಾಗ" ಎಂದು ಬಿಜೆಪಿ ಎಂಎಲ್‌ಸಿ ಛಲವಾದಿ ಟಿ.ನಾರಾಯಣಸ್ವಾಮಿ ಆಪಾದಿಸಿದ್ದಾರೆ.
"ಈ ವದಂತಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಟೂಲ್‌ಕಿಟ್" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನಂದಿನಿ ಜಾಗದಲ್ಲಿ ಅಮುಲ್‌ಗೆ ನಾವು ಒತ್ತು ನೀಡುವುದಿಲ್ಲ. ಸರ್ಕಾರ ಇಂಥ ನಿರ್ಧಾರವನ್ನು ಎಂದೂ ತೆಗೆದುಕೊಂಡಿಲ್ಲ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸುಳ್ಳು ಪ್ರಚಾರ. ಮುಂಬರುವ ವಿಧಾನಸಭಾ ಚುನಾವಣೆಗೆ ಇದು ಉಭಯ ಪಕ್ಷಗಳಿಗೆ ಟೂಲ್‌ಕಿಟ್" ಎಂದು ಅವರು ಟೀಕಿಸಿದರು.
"ನಮ್ಮ ನಂದಿನಿ ಉತ್ಪನ್ನಗಳು ಅಂತರರಾಷ್ಟ್ರೀಯ ಉತ್ಪನ್ನ. ದೇಶದ ಅರ್ಧದಷ್ಟು ಭಾಗದಲ್ಲಿ ನಮ್ಮ ಉತ್ಪನ್ನಗಳು ಮಾರಾಟವಾಗುತ್ತಿವೆ. ಆದ್ದರಿಂದ ಎರಡು ಸಂಸ್ಥೆಗಳು ವಿಲೀನವಾಗಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಹೇಳುತ್ತಿರುವುದು ಅರ್ಥಹೀನ ಹಾಗೂ ರಾಜಕೀಯ ಗಿಮಿಕ್" ಎಂದು ಅಭಿಪ್ರಾಯಪಟ್ಟರು.
ತನ್ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುವುದಾಗಿ ಅಮುಲ್ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.