ಸೋಮವಾರಪೇಟೆ | ಕಾಂಕ್ರೀಟ್ ರಸ್ತೆ ಮೇಲೆ ಡಾಂಬರು: ನಾಗರಿಕರ ಟೀಕೆ

ಸೋಮವಾರಪೇಟೆ, ಎ.11: ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿದ್ದು, ಧೀರ್ಘಕಾಲ ಬಾಳಿಕೆ ಬರುವಂತಹ ಕಾಂಕ್ರೀಟ್ ರಸ್ತೆಗೆ ಡಾಂಬರೀಕರಣ ಮಾಡಿದ ಘಟನೆ ರವಿವಾರ ನಡೆದಿದೆ.
ಪಟ್ಟಣದ ಮುಖ್ಯ ರಸ್ತೆಯಿಂದ ಸೋಮೇಶ್ವರ ದೇವಾಲಯದವರೆಗೆ ರಸ್ತೆ ಚೆನ್ನಾಗಿದ್ದರೂ ಅದರ ಮೇಲೆಯೇ ಡಾಂಬರೀಕರಣ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಗುಂಡಿಬಿದ್ದ ರಸ್ತೆಯಲ್ಲೇ ರೈತರು ಎರಡು ದಶಕಗಳಿಂದ ಹೆಣಗಾಡುತ್ತಿದ್ದು, ಇಲ್ಲಿಯವರೆಗೆ ರಸ್ತೆಗೆ ಅನುದಾನ ಕೊಟ್ಟಿಲ್ಲ ಎಂದು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ ಮಾಡುತ್ತಿರುವ ಸಂದರ್ಭ ಪಟ್ಟಣ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಮೇಲೆ ಡಾಂಬರು ಎಳೆಯುತ್ತಿರುವುದು ನಾಗರಿಕರ ಟೀಕೆಗೆ ಅಸ್ಪದವಾಗಿದೆ. ನಗರೋತ್ಥಾನ ಯೋಜನೆಯಲ್ಲಿ ಪಟ್ಟಣ ಪಂಚಾಯತ್ ಗೆ 2.26ಕೋಟಿ ರೂ. ಬಿಡುಗಡೆಯಾಗಿ 4 ತಿಂಗಳು ಕಳೆದಿದ್ದು, ಚುನಾವಣೆ ಸಂದರ್ಭದಲ್ಲಿ ಕಾಮಗಾರಿ ಪ್ರಾರಂಭ ಮಾಡಿರುವುದಕ್ಕೂ ಚುನಾವಣಾ ಗಿಮಿಕ್ ಎಂಬ ಟೀಕೆಗಳು ಕೇಳಿಬಂದವು.
ಕಳೆದ 10 ವರ್ಷಗಳ ಹಿಂದೆ 5ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯ ರಸ್ತೆ ಸೇರಿದಂತೆ ಕೆಲ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದ್ದು, ಇನ್ನು 10 ವರ್ಷಗಳ ಕಾಲ ಕಾಂಕ್ರೀಟ್ ರಸ್ತೆ ಬಾಳಿಕೆ ಬರುತ್ತಿತ್ತು ಎನ್ನಲಾಗಿದೆ. ಈಗ ಡಾಂಬರೀಕರಣ ಮಾಡಿರುವುದರಿಂದ ಎರಡು ವರ್ಷಕೊಮ್ಮೆ ಗುಂಡಿ ಮುಚ್ಚುವ ಕಾಮಗಾರಿಗೆ ಜನರ ತೆರಿಗೆ ಹಣವನ್ನು ತೆಗೆದಿಡಬೇಕಾಗಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
'ಕಾಂಕ್ರೀಟ್ ರಸ್ತೆ ಹಾಳಾಗಿದೆ. ಡಾಂಬರೀಕರಣ ಮಾಡಿ ಕೊಡುವಂತೆ ವಾರ್ಡ್ ಸದಸ್ಯರು ಕೇಳಿಕೊಂಡ ಮೇರೆಗೆ ಡಾಂಬರೀಕರಣ ಮಾಡಲಾಗಿದೆ. ಈಗ ರಸ್ತೆ ಸಂಚಾರಕ್ಕೆ ಉತ್ತಮವಾಗಿದೆ'
ನಾಚಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್
----------------------------------------------
ಸಮಸ್ಯೆ ಇದ್ದ ಕಡೆ ಕಾಮಗಾರಿ ಮಾಡಬೇಕು. ಕೆಲ ವಾರ್ಡ್ ಗಳಲ್ಲಿ ತಡೆಗೋಡೆ ಇಲ್ಲದೆ ಮನೆಗಳು ಕುಸಿಯುವ ಹಂತದಲ್ಲಿವೆ. 7ನೇ ವಾಡ್೯ನಲ್ಲಿ ಬಡವರ ಮನೆಯೊಳಗೆ ಜಲ ಬರುತ್ತಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಅನುದಾನವನ್ನು ಉಪಯೋಗಿಸಬೇಕು. ಕಾಂಕ್ರೀಟ್ ರಸ್ತೆ ಮೇಲೆ ಡಾಂಬರು ಎಳೆಯುವುದು ಖಂಡನೀಯ.
ಎಚ್.ಎ.ನಾಗರಾಜು, ಅಧ್ಯಕ್ಷರು, ನಿವೇಶನ ರಹಿತರ ಹೋರಾಟ ಸಮಿತಿ







