ಬೆಂಗಳೂರು: ಮನೆ ಮುಂದೆ ನಾಯಿ ವಿಸರ್ಜನೆ ಮಾಡಿಸಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯ ಥಳಿಸಿ ಕೊಲೆ!

ಬೆಂಗಳೂರು: ಸಾಕು ನಾಯಿಯನ್ನು ಕರೆದುಕೊಂಡು ಬಂದು ಮನೆ ಮುಂದೆ ವಿಸರ್ಜನೆ ಮಾಡಿಸಿದ್ದನ್ನು ಆಕ್ಷೇಪಿಸಿದ್ದಕ್ಕೆ ವ್ಯಕ್ತಿಯನ್ನು ಥಳಿಸಿ ಕೊಲೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮುನಿರಾಜು ಕೊಲೆಯಾದ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಮತ್ತೋರ್ವ ಮುರುಳಿ ಎಂಬವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಅರೋಪಿಗಳಾದ ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮುನಿರಾಜು ಅವರ ಮನೆ ಮುಂದೆ ಪ್ರಮೋದ್ ಎಂಬಾತ ನಿತ್ಯ ನಾಯಿ ಕರೆದುಕೊಂಡು ಬಂದು ವಿಸರ್ಜನೆ ಮಾಡಿಸುತ್ತಿದ್ದ. ಇದನ್ನು ಮುನಿರಾಜು ಆಕ್ಷೇಪಿಸಿದ್ದರು. ನಂತರ ಪ್ರಮೋದ್, ರವಿಕುಮಾರ್ ಎಂಬಾತನನ್ನು ಸೇರಿಸಿಕೊಂಡು ನಾಯಿ ಜೊತೆಗೆ ಬಂದು ಮುನಿರಾಜು ಮನೆ ಮುಂದೆಯೇ ನಿಂತು ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.
ಈ ವಿಚಾರಕ್ಕೆ ಮುನಿರಾಜು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ಇಬ್ಬರಿಗೂ ಕರೆದು ಬುದ್ದಿ ಹೇಳಿ ಮುಚ್ಚಳಿಕೆ ಬರೆಸಲಾಗಿತ್ತು ಎಂದು ಹೇಳಲಾಗಿದೆ.
ಠಾಣೆಗೆ ಹೋಗಿ ಬಂದ ಮರುದಿನ ಮತ್ತೆ ಗಲಾಟೆಯಾಗಿದ್ದು, ಗಲಾಟೆ ವೇಳೆ ಪ್ರಮೋದ್ ಮತ್ತು ರವಿಕುಮಾರ್ ದೊಣ್ಣೆಯಿಂದ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.