ಸುಳ್ಯ: ತೆಂಗಿನ ಮರದಿಂದ ಬಿದ್ದು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮೃತ್ಯು

ಸುಳ್ಯ.ಎ.11: ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ಒಂದೇ ದಿನದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ತೆಂಗಿನ ಮರದಿಂದ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಅಂಬೆಕಲ್ಲು ಬಳಿಯ ಪರ್ಲಡಿ ಎಂಬಲ್ಲಿ ಎ.10 ರಂದು ಮಧ್ಯಾಹ್ನ ತೆಂಗಿನ ಕಾಯಿ ಕೀಳಲು ತೆಂಗಿನ ಮರ ಹತ್ತಿದ್ದ ನೆಲ್ಲೂರು ಕೇಮ್ರಾಜೆ ಗ್ರಾಮದ ದಾಸನಕಜೆ ದಿ.ಶಿವರಾಮ ಮಣಿಯಾಣಿ ಅವರ ಪುತ್ರ ಸತೀಶ ಮಣಿಯಾಣಿ(35) ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಅವಿವಾಹಿತರಾಗಿದ್ದು ತಾಯಿ, ಒರ್ವ ಸಹೋದರನನ್ನು ಅಗಲಿದ್ದಾರೆ. ಸತೀಶ್ ಅವರ ತಂದೆ, ಒರ್ವ ಸಹೋದರ ಕೂಡ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿದ್ದರು ಎನ್ನಲಾಗಿದೆ.
ಇನ್ನೊಂದು ಘಟನೆ ನೆಲ್ಲೂರು ಕೇರ್ಮಾಜೆ ಗ್ರಾಮದಲ್ಲೇ ಸಂಭವಿಸಿದ್ದು, ನೆಲ್ಲೂರು ಕೇಮ್ರಾಜೆ ಗ್ರಾಮದ ನಾರ್ಣಕಜೆ ದಿ.ಕುಂಞ ಎಂಬವರ ಪುತ್ರ ಹರೀಶ್(29) ಮೃತಪಟ್ಟಿದ್ದಾರೆ. ಹರೀಶ್ ನೆಲ್ಲೂರು ಕೇಮ್ರಾಜೆ ಗ್ರಾಮದ ಬೊಳ್ಳಾಜೆ ಬಳಿಯ ಕಂದೂರು ಎಂಬಲ್ಲಿ ಎ.11ರಂದು ತೆಂಗಿನ ಕಾಯಿ ತೆಗೆಯಲು ಮರ ಹತ್ತಿ ಇಳಿಯುತ್ತಿದ್ದ ವೇಳೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.







