ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆ: ರಮೇಶ್ ಬಾಬು

ಬೆಂಗಳೂರು, ಎ.11: ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಈವರೆಗೆ ಅಭ್ಯರ್ಥಿಳ ಪಟ್ಟಿಯನ್ನು ಬಿಟ್ಟಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ದಿಲ್ಲಿಯಲ್ಲಿ ಇದ್ದುಕೊಂಡು ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎನ್ನುತ್ತಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಈ ಕುರಿತು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಬಹಳ ಶೋಚನೀಯ ಸ್ಥಿತಿಗೆ ಬಂದು ನಿಂತಿದ್ದು, ಅಭ್ಯರ್ಥಿ ಪಟ್ಟಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿದೆ. 2018ರ ಚುನಾವಣೆ ಸಮಯದಲ್ಲಿ ಬಿಜೆಪಿ ಎಪ್ರಿಲ್ 8ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರು. 1952ರ ಚುನಾವಣೆಯಿಂದ 2018ರವರೆಗೆ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಲು ಜನಸಂಘಕ್ಕಾಗಲಿ, ಬಿಜೆಪಿಗಾಗಲಿ ಸಾಧ್ಯವಾಗಿಲ್ಲ ಎಂದರು.
ಮೋದಿ ಹಾಗೂ ಅಮಿತ್ ಶಾ, ನಡ್ಡಾ ಅವರು ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಇದೆಲ್ಲವೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ. 40ಪರ್ಸೆಂಟ್ ಕಮಿಷನ್, ಪೇಸಿಎಂ, ಪಿಎಸ್‍ಐ, ಇತರೆ ನೇಮಕಾತಿ, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಅಕ್ರಮ ಟೆಂಡರ್ ಸೇರಿದಂತೆ ಅನೇಕ ಕಾರಣಗಳಿಂದ ಬಿಜೆಪಿ ತಲ್ಲಣಗೊಂಡು ಸೋಲೋಪ್ಪಿಕೊಂಡಿದೆ ಎಂದು ರಮೇಶ್ ಬಾಬು ತಿಳಿಸಿದರು.