ಸುಳ್ಯ ವಿಧಾನಸಭಾ ಕ್ಷೇತ್ರ: ಆದಿದ್ರಾವಿಡ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಲು ಆಗ್ರಹ

ಮಂಗಳೂರು, ಎ.11: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆದಿದ್ರಾವಿಡ ಸಮುದಾಯದ ಭಾಗಿರಥಿ ಮುರುಳ್ಯರಿಗೆ ನೀಡಬೇಕು ಎಂದು ದ.ಕ. ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಮಂಗಳೂರು ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ, ರಾಜ್ಯದ ರಾಜಕೀಯದಲ್ಲಿ ಜಾತಿ ಸಮೀಕರಣ ನಡೆಯುತ್ತಿದೆ. ಸುಳ್ಯ ವಿಧಾನಸಭಾ ಕ್ಷೇತ್ರ (ಮೀಸಲು)ದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ನಾವು ಗಮನಿಸುತ್ತಿದ್ದೇವೆ. ಕಳೆದ 30-40 ವರ್ಷಗಳಿಂದೀಚೆಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿಯಲ್ಲಿ ಪ್ರಮುಖ ಸಮುದಾಯ ಎನಿಸಿಕೊಂಡಿರುವ ಆದಿದ್ರಾವಿಡ ಸಮುದಾಯಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಅವಕಾಶ ನೀಡದೆ ಅನ್ಯಾಯವೆಸಗಿವೆ. ಈ ಬಾರಿ ಆದಿದ್ರಾವಿಡ ಸಮುದಾಯ ಸಂಘಟಿತವಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಅನಿಲ್ ಕುಮಾರ್ ಕಂಕನಾಡಿ, ಸುನಿಲ್ ಕುಮಾರ್ ಬಲ್ಲಾಳ್‌ಬಾಗ್, ಮಾಧವ ಕಡೇಶಿವಾಲಯ, ಪ್ರಸಾದ್ ಬಿಂಬಿಲ ಉಪಸ್ಥಿತರಿದ್ದರು.