ಮೋದಿ ರಾಜ್ಯ ಪ್ರವಾಸಕ್ಕೆ ಕೇಂದ್ರ ಸರಕಾರವೇ ವೆಚ್ಚ ಭರಿಸಲಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯ

ಬೆಂಗಳೂರು, ಎ.11: ‘ಪ್ರಧಾನಿ ಮೋದಿ ರಾಜ್ಯ ಪ್ರವಾಸದಿಂದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿದ್ದು, ಅವರ ಪ್ರವಾಸದ ಹಣವನ್ನು ಕೇಂದ್ರ ಸರಕಾರವೇ ಭರಿಸಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಅವರು ಪಕ್ಷದ ನಾಯಕರಾಗಿ ಪ್ರವಾಸ ಮಾಡುತ್ತಿಲ್ಲ. ಅವರು ರಾಜ್ಯ ಸರಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸರಕಾರ ಅವರ ಕಾರ್ಯಕ್ರಮಕ್ಕೆ ಹಣ ವ್ಯಯ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ 30 ಕೋಟಿ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ 25 ಕೋಟಿ, ಬೆಂಗಳೂರು ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿ ಉದ್ಘಾಟನೆಗೆ 9.36 ಕೋಟಿ ರೂಪಾಯಿ ವೆಚ್ಚವಾಗಿದೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರವೇ ವೆಚ್ಚ ಮಾಡಲಿ. ಇಷ್ಟಕ್ಕೂ ಮೋದಿ ಅವರು ಬಂದು ಉದ್ಘಾಟನೆ ಮಾಡಿರುವ ಎಲ್ಲಾ ಕಾಮಗಾರಿಗಳು ಅಪೂರ್ಣ ಕಾಮಗಾರಿಗಳೇ ಎಂದು ಲಕ್ಷ್ಮಣ್ ಟೀಕಿಸಿದರು.
ಮೋದಿ ಅವರು ರಾಜ್ಯಕ್ಕೆ ಬಂದಾಗ ಪ್ರತ್ಯೇಕ ರಸ್ತೆ, ಹೆಲಿಪ್ಯಾಡ್, ಅತಿಥಿ ಗೃಹ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಹುಲಿ ಗಣತಿ ಮುಕ್ತಾಯಕ್ಕೆ ಇನ್ನು 3 ತಿಂಗಳು ಬಾಕಿ ಇರುವಾಗಲೇ, ಬಂಡೀಪುರ ಪ್ರವಾಸ ಮಾಡಿದ್ದಾರೆ. ಅವಧಿಗೆ ಮುಂಚೆಯೇ ಅವರು ಹುಲಿ ಗಣತಿ ವರದಿಯನ್ನೂ ಸಹ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.







