ಮಂಗಳೂರು: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಮೃತ್ಯು

ಮಂಗಳೂರು : ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಕುಂಟಿಕಾನದಲ್ಲಿ ಮಂಗಳವಾರ ನಡೆದಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮೂಲತಃ ಬೆಳ್ತಂಗಡಿ ಮುಂಡೂರು ನಡುಮನೆ ನಿವಾಸಿ ಪ್ರಭಾಕರ ಆಚಾರ್ಯ (55) ಮೃತರು. ಇವರು ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಬೆಳಗ್ಗೆ ಇವರು ತಾನು ನೆಲೆಸಿದ್ದ ಮನೆಯಿಂದ ಕುಂಟಿಕಾನ-ಕೆಪಿಟಿ ಮಾರ್ಗವಾಗಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ನಗರದ ಎಜೆ ಆಸ್ಪತ್ರೆ ಎದುರು ತಲುಪುತ್ತಿದ್ದಂತೆಯೇ ಅವರ ಮುಂಭಾಗದಲ್ಲಿ ಚಲಿಸುತ್ತಿದ್ದ ಲಾರಿಯನ್ನು ಅದರ ಚಾಲಕನು ಎಡಕ್ಕೆ ಚಲಾಯಿಸಿಕೊಂಡು ಬಂದಿದ್ದರಿಂದ ಆ ಲಾರಿಯ ಹಿಂಬದಿಗೆ ಸ್ಕೂಟರ್ ಢಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಪ್ರಭಾಕರ ಆಚಾರ್ಯರು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿಸ್ಕಿ ಡ್ ಆಗಿ ರಸ್ತೆಗೆ ಬಿದ್ದರು ಎನ್ನಲಾಗಿದೆ.
ಗಂಭೀರ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ಪ್ರಭಾಕರ ಆಚಾರ್ಯರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಎಂದು ಮೃತ ಪ್ರಭಾಕರ ಆಚಾರ್ಯರ ಸಹೋದರ ಎಂ. ಪುರುಷೋತ್ತಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.