ಶತಾಯುಷಿ ಮತದಾರರಿಗೆ ವಿಶೇಷ ಆಹ್ವಾನ ಪತ್ರ: ಉಡುಪಿ ಡಿಸಿಯಿಂದ ಅಭಿಯಾನಕ್ಕೆ ಚಾಲನೆ

ಕುಂದಾಪುರ, ಎ.11: ಉಡುಪಿ ಜಿಲ್ಲೆಯಲ್ಲಿರುವ 209 ಮಂದಿ ಶತಾಯುಷಿ ಮತದಾರರಿಗೆ ಮೇ 10ರಂದು ನಡೆಯುವ ಮತದಾನದಲ್ಲಿ ಭಾಗವಹಿಸುವಂತೆ ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶೇಷ ಆಹ್ವಾನ ನೀಡಲಾಗುತ್ತಿದ್ದು, ತಲ್ಲೂರು ಗ್ರಾಪಂ ವ್ಯಾಪ್ತಿಯ ಉಪ್ಪಿನಕುದ್ರುವಿನಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಶತಾಯುಷಿ ಮತದಾರರಾದ 101 ವರ್ಷದ ಆಲಿಸ್ ಅವರಿಗೆ ಆಹ್ವಾನ ಪತ್ರವನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಸ್ವೀಪ್ ಸಮಿತಿಯಿಂದ ವಿಶೇಷ ಆಹ್ವಾನ ನೀಡಲಾಗುವ ಅಭಿಯಾನ ಹಮ್ಮಿಕೊಂಡಿದ್ದು, ಉಪ್ಪಿನಕುದ್ರು ವಿನಲ್ಲಿ ಶತಾಯುಷಿಯೊಬ್ಬರಿಗೆ ಮೊದಲಿಗೆ ಆಹ್ವಾನ ನೀಡಿದ್ದೇವೆ. ಈವರೆಗಿನ ಚುನಾವಣೆಯೆಲ್ಲಿ ಭಾಗವಹಿಸಿದ್ದ ಅವರನ್ನು ಸಮ್ಮಾನಿಸಿದ್ದೇವೆ. ಇದೊಂದು ಖುಷಿಯ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬ. ಇವರು ಪ್ರತಿ ಚುನಾವಣೆಯಲ್ಲೂ ಭಾಗವಹಿಸಿದ್ದಾರೆ ಎಂದರು.
ಇಂತಹ ಶತಾಯುಷಿ ಮತದಾರರು ನಮ್ಮ ಜಿಲ್ಲೆಯ ಹೆಮ್ಮೆ. ಉಡುಪಿ ಜಿಲ್ಲೆಯ ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ನಮ್ಮ ಸಹಾಯವಾಣಿ, ಮತಗಟ್ಟೆ ಅಧಿಕಾರಿಗಳ ಬಳಿ ಖಚಿತಪಡಿಸಿಕೊಳ್ಳಬೇಕು ಎಂದವರು ಹೇಳಿದರು.
ಇದೇ ವೇಳೆ 101 ವರ್ಷದ ಆಲಿಸ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಸಮ್ಮಾನಿಸಲಾಯಿತು. ಈ ವೇಳೆ ಸಂತಸ ವ್ಯಕ್ತಪಡಿಸಿದ ಅವರು, ನಾನು ಪ್ರತಿ ಸಲ ಮತದಾನ ಮಾಡಿದ್ದೇನೆ. ನೀವೆಲ್ಲ ಮತದಾನ ಮಾಡಬೇಕು. ಎಲ್ಲರೂ ಮತದಾನದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
19 ವರ್ಷದ ನಿಶಾಂತ್ ಪ್ರಥಮ ಬಾರಿಗೆ ಈ ಬಾರಿ ಮತ ಚಲಾಯಿಸುತ್ತಿದ್ದು, ಈ ವಿಶೇಷ ಆಹ್ವಾನ ಪತ್ರವನ್ನು ಅವರೇ ಓದಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಸನ್ನ ಎಚ್., ಕುಂದಾಪುರ ಉಪವಿಭಾಗದ ಆಯುಕ್ತೆ ರಶ್ಮಿ ಎಸ್.ಆರ್., ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ತಲ್ಲೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರತ್ನ, ಗ್ರಾಮ ಲೆಕ್ಕಿಗ ಹರೀಶ್, ಬಿಎಲ್‌ಒ ನಾರಾಯಣ್ ಉಪಸ್ಥಿತರಿದ್ದರು.