‘ಸ್ವೀಪ್’ನಿಂದ ಮತದಾನಕ್ಕಾಗಿ ಜನಜಾಗೃತಿ ಕಾರ್ಯಕ್ರಮ

ಮಂಗಳೂರು: ಮತದಾನ ಸಂವಿಧಾನಾತ್ಮಕವಾಗಿ ಬಂದ ಹಕ್ಕು. ಅದನ್ನು ಮೇ 10 ರಂದು ನಡೆಯುವ ಚುನಾವಣಾ ಹಬ್ಬದಲ್ಲಿ ಚಲಾಯಿಸಲು ಎಲ್ಲರೂ ಭಾಗವಹಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಸಾಕಾರಗೊಳಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಪಂ ಸಿಇಒ ಡಾ. ಕುಮಾರ್ ಹೇಳಿದರು.
ದ.ಕ.ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ನಗರದ ಸಂತ ಆಗ್ನೇಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿಯ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀದಿ ನಾಟಕ ಹಾಗೂ ವ್ಯಂಗ್ಯ ಚಿತ್ರದ ಮೂಲಕ ಅರಿವು ಪಡೆದು ಪೋಷಕರು ಹಾಗೂ ಸಮಾಜದಲ್ಲಿ ಮತದಾನ ಹಕ್ಕು ಪಡೆದಿರುವ ಎಲ್ಲರನ್ನು ಮತದಾನ ಮಾಡಲು ಪ್ರೇರೇಪಣೆ ಮಾಡಬೇಕು. ಮತದಾನ ಕೇಂದ್ರಕ್ಕೆ ಹೋಗು ವಾಗ ಯಾರೋ ಹೇಳಿದ ಪಕ್ಷಕ್ಕೆ ಮತದಾನ ಮಾಡುವುದಲ್ಲ. ನಾವು ಸ್ವ ಅರಿವಿನಿಂದ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಯುವ ಮತದಾರರು ಹಾಗೂ ಮತದಾನ ಅರಿವು ಹೆಚ್ಚಿಸಲು ಸ್ವೀಪ್ ಸಮಿತಿ ಮತ್ತು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ ಎಂದು ಡಾ. ಕುಮಾರ್ ಹೇಳಿದರು.
ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ ಈ ದೇಶದ ಪ್ರಜೆಯಾಗಿ ನಾವು ಮತದಾನ ಮಾಡಬೇಕು. ಯೋಗ್ಯ ಸರಕಾರ ಹಾಗೂ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಸ್ವೀಪ್ ಐಕನ್ ಜಗದೀಶ ಪೂಜಾರಿ, ಪ್ರಾಂಶುಪಾಲೆ ಡಾ. ವೆನಿಸಾ ಎ.ಸಿ, ಇಎಲ್‌ಸಿ ಸದಸ್ಯ ಡಾ. ಮೀರಾ, ವ್ಯಂಗ್ಯ ಚಿತ್ರಕಾರ ಜಾನ್ ಚಂದ್ರ, ಉದಯ ಕುಮಾರ್ ಬಿ., ಸೆಕ್ಟರ್ ಅಫೀಸರ್ ರಘಪತಿ ಕೇಕುಣ್ಣಾಯ, ಲತಾ, ಸ್ವೀಪ್ ಸಮಿತಿ ಸದಸ್ಯರಾದ ಮಂಜುಳಾ, ತೇಜಾಕ್ಷಿ, ಡೊಂಬಯ್ಯ ಇಡ್ಕಿದು ಮತ್ತಿತರರು ಉಪಸ್ಥಿತರಿದ್ದರು.







