"ಡ್ರೋನ್ ಗಳ ಮೂಲಕ ಗಡಿಯಾಚೆಯಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯ ಗಂಭೀರ ಸವಾಲನ್ನು ದೇಶ ಎದುರಿಸುತ್ತಿದೆ"
ವಿಶ್ವಸಂಸ್ಥೆಯಲ್ಲಿ ಭಾರತೀಯ ರಾಯಭಾರಿ ರುಚಿರಾ ಕಾಂಬೋಜ್

ವಿಶ್ವಸಂಸ್ಥೆ,ಎ.11: ಭಾರತವು ಡ್ರೋನ್ ಗಳ ಮೂಲಕ ಗಡಿಯಾಚೆಯಿಂದ ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆಯ ಗಂಭೀರ ಸವಾಲನ್ನು ಎದುರಿಸುತ್ತಿದೆ ಮತ್ತು ಇದು ಅಲ್ಲಿಯ ಸರಕಾರಿ ಅಧಿಕಾರಿಗಳ ಸಕ್ರಿಯ ಬೆಂಬಲವಿಲ್ಲದೆ ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತೀಯ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್ ಹೇಳಿದ್ದಾರೆ.
ಅವರು ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ‘ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು: ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳ ರಫ್ತುಗಳನ್ನು ನಿಯಂತ್ರಿಸುವ ಒಪ್ಪಂದಗಳ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳು ’ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾರ್ಯಕ್ರಮವು ಎಪ್ರಿಲ್ ತಿಂಗಳಿಗೆ ರಶ್ಯಾದ ಅಧ್ಯಕ್ಷತೆಯಡಿ ನಡೆಯಿತು.
ಭಯೋತ್ಪಾದಕರೊಂದಿಗೆ ಶಾಮೀಲಾಗಿರುವ ಮತ್ತು ಶಂಕಿತ ಭಯೋತ್ಪಾದನೆ ಹರಡುವಿಕೆಯ ಪುರಾವೆಗಳಿರುವ ಕೆಲವು ದೇಶಗಳನ್ನು ಅವುಗಳ ದುಷ್ಕೃತ್ಯಗಳಿಗೆ ಹೊಣೆಗಾರರನ್ನಾಗಿಸಬೇಕು ಎಂದು ಕಾಂಬೋಜ್ ಪ್ರತಿಪಾದಿಸಿದರು.
ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳ ರಫ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತದೆ,ಹೀಗಾಗಿ ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಅವರು ಹೇಳಿದರು.
ಶಂಕಿತ ಭಯೋತ್ಪಾದನೆ ಪ್ರಸರಣ ಪುರಾವೆಗಳನ್ನು ಹೊಂದಿರುವ ಕೆಲವು ದೇಶಗಳು ಸುಪ್ತ ಪ್ರಸರಣ ಜಾಲಗಳನ್ನು ಹಾಗೂ ವಂಚನೆಯಿಂದ ಸೂಕ್ಷ್ಮ ಉಪಕರಣಗಳನ್ನು ಮತ್ತು ತಂತ್ರಜ್ಞಾನಗಳ ಸ್ವಾಧೀನದ ಪರಿಪಾಠವನ್ನು ಹೊಂದಿದ್ದು,ಇಂತಹ ದೇಶಗಳು ಭಯೋತ್ಪಾದಕರು ಮತ್ತು ಇತರ ದೇಶರಹಿತರೊಂದಿಗೆ ಶಾಮೀಲಾದಾಗ ಇಂತಹ ಬೆದರಿಕೆಗಳು ಹಲವು ಪಟ್ಟು ಹೆಚ್ಚುತ್ತವೆ. ಉದಾಹರಣೆಗೆ ಭಯೋತ್ಪಾದಕ ಸಂಘಟನೆಗಳು ಹೊಂದಿರುವ ಸಣ್ಣ ಶಸ್ತ್ರಾಸ್ತ್ರಗಳ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಏರಿಕೆಯು ಈ ದೇಶಗಳ ಪ್ರಾಯೋಜಕತ್ವ ಅಥವಾ ಬೆಂಬಲವಿಲ್ಲದೆ ಈ ಸಂಘಟನೆಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎನ್ನುವುದನ್ನು ಮತ್ತೆ ಮತ್ತೆ ನಮಗೆ ನೆನಪಿಸುತ್ತದೆ ಎಂದು ಕಾಂಬೋಜ್ ನುಡಿದರು.
ಭಾರತವು ಡ್ರೋನ್ಗಳ ಮೂಲಕ ಗಡಿಯಾಚೆಯಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯ ಗಂಭೀರ ಸವಾಲನ್ನು ಎದುರಿಸುತ್ತಿದೆ ಮತ್ತು ಇದು ಈ ಪ್ರದೇಶಗಳ ನಿಯತ್ರಣ ಹೊಂದಿರುವ ಸರಕಾರಿ ಅಧಿಕಾರಿಗಳ ಸಕ್ರಿಯ ಬೆಂಬಲವಿಲ್ಲದೆ ಸಾಧ್ಯವಿಲ್ಲ ಎಂದು ಪಾಕಿಸ್ತಾನವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಹೇಳಿದರು.
ಇಂತಹ ನಡವಳಿಕೆಗಳನ್ನು ಖಂಡಿಸುವಂತೆ ಮತ್ತು ತಮ್ಮ ದುಷ್ಕೃತ್ಯಗಳಿಗಾಗಿ ಅಂತಹ ದೇಶಗಳನ್ನು ಹೊಣೆಗಾರರಾಗಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಾಂಬೋಜ್ ಕರೆನೀಡಿದರು.







