ಬಿಜೆಪಿ ಟಿಕೆಟ್: ಉಡುಪಿ ಜಿಲ್ಲೆಯ ಮೊದಲ ಪಟ್ಟಿಯಲ್ಲಿ 3 ಹೊಸಮುಖಗಳು
ಬೈಂದೂರು ಸಸ್ಪೆನ್ಸ್

ಉಡುಪಿ: ಮೇ 10ರಂದು ನಡೆಯಲಿರುವ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಪಕ್ಷದ ಮೊದಲ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ ಐದು ಸ್ಥಾನಗಳಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಹೆಸರಿಸಿರುವ ಬಿಜೆಪಿ ಹೈಕಮಾಂಡ್ ಮೂರು ಹೊಸಮುಖಗಳನ್ನು ಕಣಕ್ಕೆ ಇಳಿಸಿದೆ.
ನಿರೀಕ್ಷೆಯಂತೆ ಕುಂದಾಪುರದಲ್ಲಿ ಐದು ಬಾರಿಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಶಿಫಾರಸ್ಸಿನಂತೆ ಹಿರಿಯ ನಾಯಕ ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಟಿಕೇಟ್ ನೀಡಿದ್ದರೆ, ಉಡುಪಿಯಲ್ಲಿ ಮೊಗವೀರ ಮುಖಂಡ ಯಶಪಾಲ್ ಸುವರ್ಣರಿಗೆ ಮಣೆ ಹಾಕಿದೆ.
ಕಾಪು ಕ್ಷೇತ್ರದಲ್ಲಿ ಉದ್ಯಮಿ ಹಾಗೂ ಹಿರಿಯ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಿರುವ ಪಕ್ಷ, ಕಾರ್ಕಳದಲ್ಲಿ ಹಾಲಿ ಶಾಸಕ ಹಾಗೂ ಸಚಿವ ವಿ.ಸುನಿಲ್‌ಕುಮಾರ್ ಅವರನ್ನು ಟಿಕೆಟ್‌ನ್ನು ನೀಡಿದೆ.
ಈ ಮೂಲಕ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿಯಲ್ಲಿ ಕೆ.ರಘುಪತಿ ಭಟ್ ಹಾಗೂ ಕಾಪುವಿನಲ್ಲಿ ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್‌ನ್ನು ನಿರಾಕರಿಸಿದೆ.
ಬೈಂದೂರ್ ಕ್ಷೇತ್ರಕ್ಕೆ ಈ ಪಟ್ಟಿಯಲ್ಲಿ ಟಿಕೆಟ್ ಪ್ರಕಟವಾಗಿಲ್ಲ. ಅಲ್ಲಿ ಬಿಜೆಪಿಯ ಸುಕುಮಾರ್ ಶೆಟ್ಟಿ ಹಾಲಿ ಶಾಸಕರು.







