ಇಸ್ರೇಲ್ ಪ್ರಧಾನಿ ನೆತನ್ಯಾಹು ಜನಪ್ರಿಯತೆ ಕುಸಿತ, ಚುನಾವಣೆ ನಡೆದರೆ ಬಹುಮತ ನಷ್ಟ: ಸಮೀಕ್ಷಾ ವರದಿ

ಟೆಲ್ಅವೀವ್, ಎ.11: ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನಪ್ರಿಯತೆ ಶೀಘ್ರವಾಗಿ ಕುಸಿಯುತ್ತಿದ್ದು ಈಗ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದರೆ ಅವರ `ಲಿಕುಡ್ ಪಾರ್ಟಿ' ಸಂಸತ್ತಿನಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.
ನೆತನ್ಯಾಹು ಅವರ ಲಿಕುಡ್ ಪಾರ್ಟಿಯ ಜನಪ್ರಿಯತೆಯೂ ಕುಸಿದಿದೆ. ಬಲಪಂಥೀಯ ಪಾಲುದಾರರೊಂದಿಗೆ ಸೇರಿ ಸರಕಾರ ರಚಿಸಲೂ ಕಷ್ಟವಾಗಲಿದೆ. ಸಮೀಕ್ಷೆಗೆ ಒಳಪಟ್ಟ 75%ಕ್ಕೂ ಅಧಿಕ ಮತದಾರರು ನೆತನ್ಯಾಹು ಅವರ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಇಸ್ರೇಲ್ ನ `ಚಾನೆಲ್ 13' ನಡೆಸಿದ ಸಮೀಕ್ಷೆಯ ವರದಿ ಹೇಳಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿರ್ಧಾರ, ಫೆಲೆಸ್ತೀನೀಯರನ್ನು ಗುರಿಯಾಗಿಸಿದ ಇಸ್ರೇಲಿ ಹಿಂಸಾಚಾರ ಹೆಚ್ಚುತ್ತಿರುವುದು ನೆತನ್ಯಾಹು ಬಗ್ಗೆ ದೇಶವಾಸಿಗಳಲ್ಲಿ ಅಸಮಾಧಾನ ಹೆಚ್ಚಲು ಕಾರಣವಾಗುತ್ತಿದೆ. ಒಂದು ವೇಳೆ ಈಗ ಸಂಸತ್ತಿಗೆ ಚುನಾವಣೆ ನಡೆದರೆ 120 ಸದಸ್ಯ ಬಲದ ಸಂಸತ್ತಿನಲ್ಲಿ ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕೆ ಕೇವಲ 20 ಸ್ಥಾನ ಸಿಗಬಹುದು(ಈಗ 32 ಸ್ಥಾನ ಪಡೆದಿದೆ). ಮತ್ತು ಅವರ ಧಾರ್ಮಿಕ-ರಾಷ್ಟ್ರೀಯ ಒಕ್ಕೂಟ 46 ಸ್ಥಾನಕ್ಕೆ ಸೀಮಿತಗೊಂಡು(ಈಗ 64 ಸ್ಥಾನ ಪಡೆದಿದೆ) ಬಹುಮತ ಕಳೆದುಕೊಳ್ಳಲಿದೆ. ಬೆನ್ನೀ ಗಾಂಟ್ಸ್ ಅವರ ನ್ಯಾಷನಲ್ ಯೂನಿಟ್ ಪಾರ್ಟಿ 29 ಸ್ಥಾನ, ಮಾಜಿ ಪ್ರಧಾನು ಯಾಯಿರ್ ಲ್ಯಾಪಿಡ್ ಅವರ ಯೆಷ್ ಅತೀದ್ ಪಕ್ಷ 21 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ಸಮೀಕ್ಷೆಯ ವರದಿಯಿಂದ ತುಸು ಗೊಂದಲಕ್ಕೆ ಒಳಗಾಗಿದ್ದೇನೆ. ಆದರೆ ಆತಂಕಕ್ಕೆ ಕಾರಣವಿಲ್ಲ ಎಂದು ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.
ಭದ್ರತೆ ಮರುಸ್ಥಾಪನೆಗೆ ನೆತನ್ಯಾಹು ಪ್ರತಿಜ್ಞೆ: ಉಚ್ಛಾಟಿತ ರಕ್ಷಣಾ ಸಚಿವರ ಮರುನಿಯೋಜನೆ
ಲೆಬನಾನ್ ಮತ್ತು ಸಿರಿಯಾದ ಕಡೆಯಿಂದ ರಾಕೆಟ್ ದಾಳಿ ಸಹಿತ ಹಿಂಸಾಚಾರ ಮುಂದುವರಿದಿರುವಂತೆಯೇ ಎಲ್ಲಾ ಮುಂಚೂಣಿ ನೆಲೆಗಳಲ್ಲೂ ಭದ್ರತೆಯನ್ನು ಮರುಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.
ಹಮಾಸ್ ಭಯೋತ್ಪಾದಕರು ಲೆಬನಾನ್ನಲ್ಲಿ ನೆಲೆ ಕಂಡುಕೊಳ್ಳಲು ನಾವು ಬಿಡುವುದಿಲ್ಲ ಎಂದು ಸೋಮವಾರ ಸುದ್ಧಿಗೋಷ್ಟಿಯಲ್ಲಿ ನೆತನ್ಯಾಹು ಘೋಷಿಸಿದ್ದಾರೆ. ಈ ಮಧ್ಯೆ, ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ರನ್ನು ಸಚಿವ ಸಂಪುಟದಿಂದ ಉಚ್ಛಾಟಿಸುವ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಇಸ್ರೇಲ್ ಸರಕಾರ ಘೋಷಿಸಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಧಾನಿ ನೆತನ್ಯಾಹು ಅವರ ನಿರ್ಧಾರವನ್ನು ಟೀಕಿಸಿದ್ದ ರಕ್ಷಣಾ ಸಚಿವರನ್ನು ಕಳೆದ ತಿಂಗಳು ನೆತನ್ಯಾಹು ಉಚ್ಛಾಟಿಸಿದ್ದರು.
ಆದರೆ ಇದೀಗ ಭದ್ರತಾ ಬಿಕ್ಕಟ್ಟು ಉಲ್ಬಣಿಸಿರುವುದರಿಂದ ಅನುಭವಿ ಮುಖಂಡ ಗ್ಯಾಲಂಟ್ರನ್ನು ಮರಳಿ ಸೇರ್ಪಡೆಗೊಳಿಸಲು ನೆತನ್ಯಾಹು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಇಬ್ಬರೂ ನಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಂಡಿದ್ದೇವೆ. ರಾಷ್ಟ್ರದ ಹಿತಾಸಕ್ತಿಗಾಗಿ ನಮ್ಮೊಳಗಿನ ಅಭಿಪ್ರಾಯ ಬೇಧವನ್ನು ಮರೆತು ಒಟ್ಟಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೇವೆ ಎಂದು ನೆತನ್ಯಾಹು ಘೋಷಿಸಿದ್ದಾರೆ