ಸೊಮಾಲಿಯಾಕ್ಕೆ ವ್ಯಾಪಕ ಅಂತರಾಷ್ಟ್ರೀಯ ಬೆಂಬಲ ಅಗತ್ಯ: ವಿಶ್ವಸಂಸ್ಥೆ ಮುಖ್ಯಸ್ಥರ ಆಗ್ರಹ

ಮೊಗದಿಶು, ಎ.11: ವಿನಾಶಕಾರಿ ಬರಗಾಲ ಮತ್ತು ಹೆಚ್ಚುತ್ತಿರುವ ಭಯೋತ್ಪಾದಕ ದಾಳಿ ಪ್ರಕರಣಗಳಿಂದ ಕಂಗೆಟ್ಟಿರುವ ಸೊಮಾಲಿಯಾಕ್ಕೆ ಅಂತರಾಷ್ಟ್ರೀಯ ಸಮುದಾಯದ ವ್ಯಾಪಕ ಬೆಂಬಲದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಮಂಗಳವಾರ ಆಗ್ರಹಿಸಿದ್ದಾರೆ.
ಸೊಮಾಲಿಯಾ ಭೇಟಿಯ ಅಂಗವಾಗಿ ಮಂಗಳವಾರ ರಾಜಧಾನಿ ಮೊಗದಿಶುಗೆ ಆಗಮಿಸಿದ ಗುಟೆರಸ್ ತನ್ನ ಪ್ರವಾಸವು ಒಗ್ಗಟ್ಟಿನ ಪ್ರದರ್ಶನವಾಗಿದೆ. ತೀವ್ರ ಹವಾಮಾನ ವೈಪರೀತ್ಯ ಮತ್ತು ಭಯೋತ್ಪಾದನೆಯ ಸಂಕಟದಲ್ಲಿರುವ ಸೊಮಾಲಿಯಾಕ್ಕೆ ವ್ಯಾಪಕ ಅಂತರಾಷ್ಟ್ರೀಯ ಸಮುದಾಯದ ಬೆಂಬಲ ಅಗತ್ಯವಿದೆ ಎಂಬ ಎಚ್ಚರಿಕೆಯ ಸಂದೇಶ ರವಾನಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದಿದ್ದಾರೆ.
ಹವಾಮಾನ ಬದಲಾವಣೆ ಸಮಸ್ಯೆಯಲ್ಲಿ ಸೊಮಾಲಿಯಾದ ಪಾತ್ರ ಇಲ್ಲದಿದ್ದರೂ ಸೊಮಾಲಿಯನ್ನರು ಹವಾಮಾನ ಬದಲಾವಣೆ ಸಮಸ್ಯೆಯಿಂದ ಅತೀ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಾಗಿದ್ದಾರೆ. ಸುಮಾರು 5 ದಶಲಕ್ಷದಷ್ಟು ಜನತೆ ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದಾರೆ ಎಂದು ಗುಟೆರಸ್ ಹೇಳಿದ್ದಾರೆ.
ಆಫ್ರಿಕಾದ ಶೃಂಗ ಎಂದು ಕರೆಯಲಾಗುವ ಸೊಮಾಲಿಯಾಕ್ಕೆ ಅಗತ್ಯದ ನೆರವು ಒದಗಿಸಲು 2.6 ಶತಕೋಟಿ ಡಾಲರ್ ನೆರವು ಸಂಗ್ರಹಿಸುವ ಅಭಿಯಾನಕ್ಕೆ ವಿಶ್ವಸಂಸ್ಥೆ ಚಾಲನೆ ನೀಡಿದೆ. ಆದರೆ ಇದುವರೆಗೆ ಇದರ ಕೇವಲ 15%ದಷ್ಟು ನಿಧಿ ಮಾತ್ರ ಸಂಗ್ರಹವಾಗಿದೆ . ಸೊಮಾಲಿಯಾದಲ್ಲಿ 8.3 ದಶಲಕ್ಷದಷ್ಟು ಜನತೆ ಬರಗಾಲದಿಂದ ಪರಿಣಾಮಕ್ಕೆ ಒಳಗಾಗಿದ್ದು ಜನಸಂಖ್ಯೆಯ 50%ದಷ್ಟು ಜನರಿಗೆ ಈ ವರ್ಷ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ತೀವ್ರ ಬರಗಾಲದ ಹಿಡಿತದಲ್ಲಿರುವ ಸೊಮಾಲಿಯಾದಲ್ಲಿ ಹಲವರು ಕ್ಷಾಮದ ಅಂಚಿನಲ್ಲಿದ್ದಾರೆ. ಗಾಯದ ಮೇಲೆ ಉಪ್ಪುಸವರಿದಂತೆ ಅಲ್ಖೈದಾದ ಸಹಸಂಘಟನೆ ಅಲ್-ಶಬಾಬ್ನ ಭಯೋತ್ಪಾದಕ ಕೃತ್ಯ ನಿಯಂತ್ರಣವು ಸರಕಾರಕ್ಕೆ ಪ್ರಮುಖ ಸವಾಲಾಗಿದೆ. ಸೊಮಾಲಿಯಾ, ಕೆನ್ಯಾ ಮತ್ತು ಇಥಿಯೋಪಿಯಾದಲ್ಲಿ ಸತತ 5 ವರ್ಷದ ವಿಫಲ ಮಳೆಗಾಲವು ಈ ಪ್ರದೇಶದಲ್ಲಿ ಕಳೆದ 4 ದಶಕದಲ್ಲೇ ಅತ್ಯಂತ ತೀವ್ರ ಬರಗಾಲಕ್ಕೆ ಕಾರಣವಾಗಿದ್ದು ಜಾನುವಾರುಗಳ ಸಾವು, ಬೆಳೆ ನಷ್ಟದ ಜತೆ ಕನಿಷ್ಟ 1.7 ದಶಲಕ್ಷ ಜನರು ಆಹಾರ ಮತ್ತು ನೀರನ್ನು ಅರಸುತ್ತಾ ತಮ್ಮ ಮನೆಬಿಟ್ಟು ಇತರೆಡೆ ಸ್ಥಳಾಂತರಗೊಂಡಿದ್ದಾರೆ. 2011ರಲ್ಲಿ ತೀವ್ರ ಬರದಿಂದ ಕಂಗೆಟ್ಟಿದ್ದ ಸೊಮಾಲಿಯಾದಲ್ಲಿ 2,60,000 ಜನರು ಮೃತಪಟ್ಟಿದ್ದರು. ಸಕಾಲದಲ್ಲಿ ಮತ್ತು ತ್ವರಿತವಾಗಿ ಅಂತರಾಷ್ಟ್ರೀಯ ನೆರವು ಲಭಿಸದಿರುವುದು ಈ ವ್ಯಾಪಕ ಪ್ರಮಾಣದ ಸಾವಿಗೆ ಪ್ರಧಾನ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿತ್ತು.