ಉಡುಪಿ ಜಿಲ್ಲೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 3 ಹೊಸಮುಖ: ಹಾಲಾಡಿ, ರಘುಪತಿ ಭಟ್, ಲಾಲಾಜಿಗೆ ಟಿಕೆಟ್ ನಿರಾಕರಣೆ

ಉಡುಪಿ, ಎ.11: ಮೇ 10ರಂದು ನಡೆಯಲಿರುವ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಪಕ್ಷದ ಮೊದಲ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗಿದ್ದು, ಇದರಲ್ಲಿ ಉಡುಪಿ ಜಿಲ್ಲೆಯ ಐದು ಸ್ಥಾನಗಳಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಹೆಸರಿಸಿರುವ ಬಿಜೆಪಿ ಹೈಕಮಾಂಡ್ ಮೂರು ಹೊಸಮುಖ ಗಳನ್ನು ಕಣಕ್ಕೆ ಇಳಿಸಿದೆ.
ನಿರೀಕ್ಷೆಯಂತೆ ಕುಂದಾಪುರದಲ್ಲಿ ಐದು ಬಾರಿಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಶಿಫಾರಸ್ಸಿನಂತೆ ಹಿರಿಯ ನಾಯಕ ಎ.ಜಿ.ಕೊಡ್ಗಿ ಅವರ ಪುತ್ರ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಟಿಕೆಟ್ ನೀಡಿದ್ದರೆ, ಉಡುಪಿಯಲ್ಲಿ ಮೊಗವೀರ ಮುಖಂಡ ಯಶಪಾಲ್ ಸುವರ್ಣರಿಗೆ ಮಣೆ ಹಾಕಿದೆ.
ಕಾಪು ಕ್ಷೇತ್ರದಲ್ಲಿ ಉದ್ಯಮಿ ಹಾಗೂ ಹಿರಿಯ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಿರುವ ಪಕ್ಷ, ಕಾರ್ಕಳದಲ್ಲಿ ಹಾಲಿ ಶಾಸಕ ಹಾಗೂ ಸಚಿವ ವಿ.ಸುನಿಲ್ ಕುಮಾರ್ ಅವರಿಗೆ ಟಿಕೆಟ್ ನೀಡಿದೆ.
ಈ ಮೂಲಕ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿಯಲ್ಲಿ ಕೆ.ರಘುಪತಿ ಭಟ್ ಹಾಗೂ ಕಾಪುವಿನಲ್ಲಿ ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್ ನಿರಾಕರಿಸಿದೆ.
ಟಿಕೆಟ್ ಪಡೆದವರಲ್ಲಿ ಕಿರಣ್ ಕೊಡ್ಗಿ ಬ್ರಾಹ್ಮಣರಾದರೆ, ಯಶಪಾಲ್ ಸುವರ್ಣ ಮೊಗವೀರ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಬಂಟ ಸಮುದಾಯಕ್ಕೆ ಸೇರಿದವರು. ಈ ಮೂಲಕ ಟಿಕೆಟ್ ನಿರಾಕರಿಸಲ್ಪಟ್ಟ ಮೂವರು ಶಾಸಕರ ಸಮುದಾಯದ ಅಭ್ಯರ್ಥಿಗಳಿಗೆ ಸ್ಥಾನ ಪಲ್ಲಟದೊಂದಿಗೆ ಟಿಕೆಟ್ ನೀಡಲಾಗಿದೆ.
ಇನ್ನು ಬೈಂದೂರು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಎರಡನೇ ಪಟ್ಟಿಯಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಇಲ್ಲೂ ಹಾಲಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ಇಲ್ಲೂ ಹೊಸ ಮುಖವೊಂದನ್ನು ಅಥವಾ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಯಶ್ಪಾಲ್ ಸುವರ್ಣ ಪರಿಚಯ: 43 ವರ್ಷ ಪ್ರಾಯದ ಬಿ.ಕಾಂ ಪದವೀಧರ ಯಶಪಾಲ್ ಸುವರ್ಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಷನ್‌ನ ಅಧ್ಯಕ್ಷರಾಗಿ 13 ವರ್ಷಗಳಿಂದ ಕಾರ್ಯ ನಿರ್ವಹಿಸುತಿದ್ದಾರೆ. ಇದರೊಂದಿಗೆ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸು ತಿದ್ದಾರೆ.
ಸಂಘ ಪರಿವಾರದ ವಿವಿಧ ಸಂಘಟನೆಗಳ ಮೂಲಕ ಬಿಜೆಪಿಗೆ ಬಂದ ಯಶ್ಪಾಲ್ ಸುವರ್ಣ, ಸದ್ಯ ಬಿಜೆಪಿ ಓಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಮೂರು ಅವಧಿಗೆ ಉಡುಪಿ ನಗರಸಭೆಯ ಬಿಜೆಪಿ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಯಶ್ಪಾಲ್, ರಾಜ್ಯ ಬಿಜೆಪಿ ಮೀನುಗಾರ ಕೋಶದ ಸಂಚಾಲಕರಾಗಿ, ರಾಜ್ಯ ಬಿಜೆಪಿ ಯುವಮೋರ್ಚಾದ ರಾಜ್ಯ ಕಾರ್ಯದರ್ಶಿ ಯಾಗಿ, ಡುಪಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಯಶ್ಪಾಲ್ ಸುವರ್ಣ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ 1980ರ ಚುನಾವಣೆಯಲ್ಲಿ ಸುರತ್ಕಲ್ ಕ್ಷೇತ್ರದಿಂದ ಜನಸಂಘದಿಂದ ಸ್ಪರ್ಧಿಸಿದ್ದ ರಘುನಾಥ್ ಕೋಟ್ಯಾನ್‌ಕರ್ ಇವರ ಸಂಬಂಧಿ. ಅವಿವಾಹಿತರಾಗಿರುವ ಯಶ್ಪಾಲ್ ಸುವರ್ಣ ಹಿಂದುತ್ವ ಸಂಘಟನೆ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಲ್ಲಿ ಒಬ್ಬರು.
ಕಿರಣ್ ಕುಮಾರ್ ಕೊಡ್ಗಿ: ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿಕಟವರ್ತಿ ಹಾಗೂ ಬಲಗೈ ಬಂಟರೆಂದೇ ಖ್ಯಾತರಾದ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ಶಾಸಕ ಎ.ಜಿ.ಕೊಡ್ಗಿ ಅವರ ಪುತ್ರ. ಹಾಲಾಡಿ ಅವರ ಬಲವಾದ ಒತ್ತಾಸೆಯೊಂದಿಗೆ ಈ ಬಾರಿ ಅವರ ಸ್ಥಾನದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.
1961ರ ಮಾ.1ರಂದು ಜನಿಸಿದ 62 ವರ್ಷ ಪ್ರಾಯದ ಕಿರಣ್ ಕೊಡ್ಗಿ ಬಿಎಸ್ಸಿ ಪದವೀಧರ. 1983ರಿಂದ ಅಂದರೆ ಸರಿಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯರಾಗಿರುವ ಕೊಡ್ಗಿ, ಮೊದಲು 1989ರವರೆಗೆ ಕಾಂಗ್ರೆಸ್ ಶಾಸಕ ಪ್ರತಾಪಚಂದ್ರ ಶೆಟ್ಟಿ ಅವರ ಪರವಾಗಿ ಕೆಲಸ ಮಾಡಿದ್ದರು.
ಬಳಿಕ ತಂದೆಯವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಾಗ ಇವರೂ ಬಿಜೆಪಿಯ ಕಾರ್ಯಕರ್ತರಾಗಿ ಕೆಲಸ ಮಾಡುತಿದ್ದಾರೆ. ಈ ಅವಧಿಯಲ್ಲಿ ಅವರು ಶಾಸಕ ಹಾಲಾಡಿ ಅವರ ಬಲಗೈ ಬಂಟರಾಗಿದ್ದು, ಅವರ ಚುನಾವಣೆಯ ಹಾಗೂ ಪ್ರಚಾರ ಸಮಗ್ರ ಜವಾಬ್ದಾರಿಯನ್ನು ನಿರ್ವಹಿಸುತಿದ್ದರು.
ಗುರ್ಮೆ ಸುರೇಶ್ ಶೆಟ್ಟಿ: ಉದ್ಯಮಿಯಾಗಿ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ 60ವರ್ಷ ಪ್ರಾಯದ ಗುರ್ಮೆ ಸುರೇಶ್ ಶೆಟ್ಟಿ ಅವರು, ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿ ಬಿಜೆಪಿಗೆ ಸೇರಿದವರು. ಸದ್ಯ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಕಳತ್ತೂರಿನಲ್ಲಿ ಅವರೇ ಸ್ಥಾಪಿಸಿದ ಗುರ್ಮೆ ಫೌಂಡೇಷನ್‌ನ ಅಧ್ಯಕ್ಷರೂ ಇವರಾಗಿದ್ದಾರೆ.
ಕರ್ನಾಟಕ ಹೊಟೇಲ್ ಮಾಲಕರ ಸಂಘದ ಉಪಾಧ್ಯಕ್ಷರಾಗಿ, ಮಂಗಳೂರಿನ ಅಂತಾರಾಷ್ಟ್ರೀಯ ಬಂಟ್ಸ್ ಪೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತಿದ್ದಾರೆ. ಚೇಂಬರ್ ಆಫ್ ಕಾಮರ್ಸ್‌ನ ಅಜೀವ ಸದಸ್ಯರು.
ಗುರ್ಮೆ ಟ್ರಸ್ಟ್ ಮೂಲಕ ಕಾಪು ಕ್ಷೇತ್ರದಲ್ಲಿ ರಕ್ತ ಸಂಗ್ರಹ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಹೆಸರಾಗಿರುವ ಇವರು ಬಳ್ಳಾರಿಯಲ್ಲಿ ಎಪಿಎಂಸಿ ನೌಕರರ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಯಾಗಿ ಕೆಲಸ ಮಾಡಿದ್ದರು.







