ರಶ್ಯಕ್ಕೆ 40,000 ರಾಕೆಟ್ ಪೂರೈಸಲು ಈಜಿಪ್ಟ್ ಯೋಜನೆ: ವರದಿ

ಕೈರೊ, ಎ.11: ಸೋರಿಕೆಯಾಗಿರುವ ಅಮೆರಿಕ ಗುಪ್ತಚರ ದಾಖಲೆಗಳ ಪ್ರಕಾರ, ತನ್ನ ಶಸ್ತ್ರಾಸ್ತ್ರ ಪೂರೈಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ರಶ್ಯಕ್ಕೆ 40,000 ರಾಕೆಟ್ಗಳನ್ನು ರಹಸ್ಯವಾಗಿ ಪೂರೈಸಲು ಈಜಿಪ್ಟ್ ಯೋಜಿಸಿದೆ ಎಂದು `ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
ಅಲ್ಲದೆ ರಶ್ಯಕ್ಕೆ ಫಿರಂಗಿ ಗುಂಡುಗಳು ಹಾಗೂ ಗನ್ಪೌಡರ್ ಒದಗಿಸುವ ವಿಷಯದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಎಲ್-ಸಿಸಿ ತನ್ನ ಉನ್ನತ ಮಿಲಿಟರಿ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ್ದರು. ಪಾಶ್ಚಿಮಾತ್ಯರ ಜತೆ ಸಮಸ್ಯೆಯಾಗುವುದನ್ನು ತಪ್ಪಿಸಲು ಈ ಯೋಜನೆಯ ಬಗ್ಗೆ ರಹಸ್ಯ ಕಾಯ್ದುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಫೆಬ್ರವರಿ 17ರಂದು ಈ ಸಭೆ ನಡೆದಿದ್ದು ಈ ಬೆಳವಣಿಗೆ ಅಮೆರಿಕನ್ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ದಿಗ್ಭ್ರಮೆಗೊಳಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.
ಈಜಿಪ್ಟ್ ಅಧ್ಯಕ್ಷ ಸಿಸಿ ರಶ್ಯಕ್ಕೆ ರಹಸ್ಯವಾಗಿ ರಾಕೆಟ್ ನಿರ್ಮಿಸುತ್ತಿರುವುದು ನಿಜವಾಗಿದ್ದರೆ, ನಮ್ಮ ಸಂಬಂಧದ ಸ್ಥಿತಿಗತಿಯ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅಮೆರಿಕದ ಸೆನೆಟ್ ಸದಸ್ಯ ಕ್ರಿಸ್ ಮರ್ಫಿ ಹೇಳಿದ್ದಾರೆ.







