ವಿಧಾನಸಭೆ ಚುನಾವಣೆ: ಪುತ್ತೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಆಯ್ಕೆ

ಪುತ್ತೂರು: ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮತ್ತೆ ಒಕ್ಕಲಿಗ ಸಮುದಾಯಕ್ಕೆ ಒಲಿದಿದ್ದು, ದ.ಕ.ಜಿ.ಪಂ.ಮಾಜಿ ಅಧ್ಯಕ್ಷೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕುಂತೂರು ಗ್ರಾಮದ ಆಶಾ ತಿಮ್ಮಪ್ಪ ಗೌಡ ಕುಂಡಡ್ಕ ಅವರಿಗೆ ಒಲಿದಿದೆ.
ಪದವು ನಿವಾಸಿ ತಿಮ್ಮಪ್ಪ ಗೌಡ ಅವರ ಪತ್ನಿ 65ರ ಹರೆಯದ ಆಶಾರವರು ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತೆ. ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಹೊಂದಿದ್ದಾರೆ.
ಇವರು ನೆಲ್ಯಾಡಿ ಹಾಗೂ ಬೆಳ್ಳಾರೆಯಿಂದ ಜಿ. ಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಶೇಷ ಎಂದರೇ ಇವರು ಪೆರಾಬೆ ಗ್ರಾಮದಿಂದ ಬಿಜೆಪಿಯಿಂದ ಎಂಎಲ್ ಎ ಚುನಾವಣೆ ಸ್ಪರ್ಧಿಸುತ್ತಿರುವ ಎರಡನೇ ಅಭ್ಯರ್ಥಿ. ಈ ಹಿಂದೆ ಶಕುಂತಳಾ ಟಿ ಶೆಟ್ಟಿ ಬಿಜೆಪಿಯಿಂದ ಬಂಟ್ವಾಳ ಹಾಗೂ ಪುತ್ತೂರಿನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಅರುಣ್ ಬೆಂಬಲಿಗರ ಆಕ್ರೋಶ
ಹಿಂದುತ್ವ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರು ಕ್ಷೇತ್ರಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







