ವಿಧಾನಸಭೆ ಚುನಾವಣೆ: ನಾಳೆಯಿಂದ (ಎ.13) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು, ಎ. 12: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ನಾಳೆ (ಎ.13) ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಆರಂಭ ಆಗಲಿದೆ.
ಎ.20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆದರೆ, ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಇನ್ನೂ ಕಸರತ್ತು ನಡೆಸುತ್ತಿವೆ. ಎ.21ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಎ.24ರಂದು ಕೊನೆಯ ದಿನವಾಗಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಎ.13ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಳ್ಳಲಾಗಿರುವ ಪೂರ್ವ ತಯಾರಿಗಳು ಹಾಗೂ ಅಗತ್ಯ ಸಿದ್ಧತೆಗಳನ್ನು ಕೇಂದ್ರ ಚುನಾವಣಾ ಆಯೋಗದ ಉಪ ಮುಖ್ಯ ಚುನಾವಣಾ ಆಯುಕ್ತ ಅಜಯ್ ಭಾಡೂ ಅವರು ಪರಿಶೀಲನೆ ನಡೆಸಿದರು.
ಮಂಗಳವಾರ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚುನಾವಣಾ ಪೂರ್ವ ತಯಾರಿ, ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯಕ್ರಮಗಳು, ಚುನಾವಣೆಗೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳ ಮಾಹಿತಿ, ಎಸ್‍ವಿಇಇಪಿ ಚಟುವಟಿಕೆಗಳೂ ಸೇರಿದಂತೆ ಇತರೆ ಪ್ರಚಾರ ಕಾರ್ಯಕ್ರಮಗಳು ಹಾಗೂ ಅವುಗಳ ಅನುಷ್ಠಾನದ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿದರು.
ಚುನಾವಣೆ ಪೂರ್ವತಯಾರಿಯ ಭಾಗವಾದ ಎಪಿಕ್ ಕಾರ್ಡ್‍ನ ಮುದ್ರಣ ಹಾಗೂ ವಿತರಣೆ, ಮತಗಟ್ಟೆಗಳು, ಮತಯಂತ್ರಗಳ ತರಬೇತಿ, ನಾಮನಿರ್ದೇಶನದ ಪ್ರಕ್ರಿಯೆ, ಮಾದರಿ ನೀತಿ ಸಂಹಿತೆ ಹಾಗೂ ಕಾನೂನು ವ್ಯವಸ್ಥೆಯ ಅನುಷ್ಠಾನ , ಮತಚೀಟಿಗಳ ವಿತರಣೆ, ಮತದಾನದ ದಿನದ ಪೂರ್ವತಯಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಅವರು ಮಾಹಿತಿ ಪಡೆದರು.
ನಂತರ ಎಸ್‍ವಿಇಇಪಿ ಕಾರ್ಯಕ್ರಮಗಳು, ಅಂಚೆ ಮತಪತ್ರಗಳು, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ರಾಜ್ಯ ಮತ್ತು ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ರಾಜ್ಯದಲ್ಲಿ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಒಂದು ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ಹಾಗೂ 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಅತಿ ದೊಡ್ಡ ನಗರವಾಗಿದೆ. ಬೆಂಗಳೂರು ನಗರದ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವ ತಯಾರಿಗಳ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತರು (ಚುನಾವಣೆ) ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.
34 ಚುನಾವಣಾ ಜಿಲ್ಲೆಗಳ ಚುನಾವಣಾಧಿಕಾರಿಗಳು ಹಾಗೂ ಎಸ್ಪಿಗಳೊಂದಿಗೆ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಲಾಗಿರುವ ಚುನಾವಣೆಯ ಪೂರ್ವ ತಯಾರಿ, ಕಾನೂನು ಸುವ್ಯವಸ್ಥೆ, ಎಪಿಕ್ ಕಾರ್ಡ್‍ಗಳ ಮುದ್ರಣ ಹಾಗೂ ವಿತರಣೆ, ನೀತಿ ಸಂಹಿತೆ ಅನುಷ್ಠಾನ , ಜಾಗೃತ ದಳಗಳ ನಿಯೋಜನೆ, ಮತಗಟ್ಟೆಗಳಿಗೆ ಸಿಬ್ಬಂದಿ ನಿಯೋಜನೆ ಮತ್ತು ತರಬೇತಿ, ಅಂಚೆ ಮತ ಪತ್ರಗಳ ಪ್ರಕ್ರಿಯೆ, ಮತಯಂತ್ರಗಳು ಅಗತ್ಯ ದಾಸ್ತಾನು, ಮತದಾನ ದಿನದ ಮೇಲ್ವಿಚಾರಣೆ ಹಾಗೂ ಮತ ಎಣಿಕೆಯ ವ್ಯವಸ್ಥೆ, ಸುವಿಧಾ, ಸಿ-ವಿಜಿಲ್ ಆಪ್ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಮಾಹಿತಿ ಪಡೆದು ಆಯೋಗದ ಕಾನೂನು ಪರಿಮಿತಿಯಲ್ಲಿ ವ್ಯವಸ್ಥಿತವಾಗಿ ಚುನಾವಣೆ ನಡೆಸಬೇಕು ಎಂದು ಕರೆ ನೀಡಿದರು.
‘ಮೇ 10ಕ್ಕೆ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ, ಎಪಿಕ್ ಕಾರ್ಡ್‍ಗಳ ಮುದ್ರಣ ಹಾಗೂ ವಿತರಣೆ, ಮಾದರಿ ನೀತಿ ಸಂಹಿತೆ ಅನುಷ್ಠಾನ ಸೇರಿದಂತೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಗಿದೆ’
-ಅಜಯ್ ಭಾಡೂ ಉಪ ಮುಖ್ಯ ಚುನಾವಣಾ ಆಯುಕ್ತ ಕೇಂದ್ರ ಚುನಾವಣಾ ಆಯೋಗ







