ಜನಸಾಮಾನ್ಯರ ಕಥೆ ಏನು?
ಟೋಲ್ಗತೆ ನೀಳ್ಗತೆ

►► ಸರಣಿ - 5
ಭಾರತದಾದ್ಯಂತ ಟೋಲ್ ಗೇಟ್‌ಗಳು ಮತ್ತು ಅಲ್ಲಿನ ಲೂಟಿಗಳು ಸದ್ದು ಮಾಡುತ್ತಿವೆ. ಮಂಗಳೂರಿನಲ್ಲಿ ತಿಂಗಳುಗಳ ತನಕ ನಡೆದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಹೋರಾಟ, ಮೈಸೂರಿನಲ್ಲಿ ಮನಸೋಇಚ್ಛೆ ಟೋಲ್ ದರದ ವಿರುದ್ಧ ಹೋರಾಟ ಹೀಗೆ ಜನಸಾಮಾನ್ಯರು ನಿಧಾನವಾಗಿ ಟೋಲ್ ಲೂಟಿಯ ಬಗ್ಗೆ ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಆದರೆ ಹೆಚ್ಚಿನವರಿಗೆ ಯಾಕೆ ಹೀಗೆ ರಸ್ತೆ ಸುಂಕ ಹಠಾತ್ತಾಗಿ ಮೈಮೇಲೆ ಬಂದು ಎರಗಿದೆ ಎಂಬುದು ಅರ್ಥವಾಗಿಲ್ಲ. ಈ ಮಹಾಖಾಸಗೀಕರಣ ಹಲವು ಚುಕ್ಕಿಗಳ ಚಿತ್ರ. ಪ್ರಭುತ್ವ ಅಲ್ಲಲ್ಲಿ ಹಾಕುತ್ತಾ ಬಂದಿರುವ ಹಲವು ಚುಕ್ಕಿಗಳನ್ನು ಜೋಡಿಸಿದಾಗ ಪೂರ್ಣ ಚಿತ್ರ ಅರ್ಥಾತ್ ಮಹಾಖಾಸಗೀಕರಣದ ವಿಶ್ವರೂಪ ಕಾಣಿಸುವ ಕಥೆ.
ಸರಕಾರದ ದೃಷ್ಟಿಕೋನದಿಂದ ನೋಡಿದರೆ, ಟೋಲ್ ಸಹಿತ ಹೆದ್ದಾರಿ ವ್ಯವಸ್ಥೆಯಲ್ಲಿ, ಸರಕಾರಕ್ಕೆ ಹೆಚ್ಚು ಖರ್ಚಿಲ್ಲದ ಉಚಿತ ಆದಾಯ. ಆದರೆ ಜನಸಾಮಾನ್ಯರಿಗೆ ಇದು ಹೊರೆ. ಹಾಗಾಗಿ, ಎಲ್ಲೆಡೆ ಟೋಲ್ ಹೊರೆಯ ವಿರುದ್ಧ ಧ್ವನಿಗಳು ಕೇಳಿಸತೊಡಗಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಎಲ್ಲಿ ತಪ್ಪಿಬಿದ್ದಿದ್ದಾರೆ ಎಂಬುದನ್ನು ನೋಡಲು ಪ್ರಯತ್ನಿಸೋಣ.
ಸಾಂಪ್ರದಾಯಿಕವಾಗಿ, ಹೊಸ ಹೆದ್ದಾರಿಗಳು ನಗರದಿಂದ, ಜನವಸತಿ ದಟ್ಟಣೆಯಿಂದ ದೂರ ನಿರ್ಮಾಣ ಆಗುವುದರಿಂದ, ಮಹಾನಗರಗಳಲ್ಲಿ, ದೊಡ್ಡ ಪಟ್ಟಣಗಳಲ್ಲಿ ಟೋಲ್ ಹೆಚ್ಚಿನ ತಲೆನೋವು ತರುವುದಿಲ್ಲ. ನಗರದ ಒಳಗಿನ ರಸ್ತೆ ಸಂಚಾರಕ್ಕೆ ಅವರು ಟೋಲ್ ತೆರಬೇಕಾಗಿಲ್ಲದಿರುವುದರಿಂದ, ಅವರ ದೈನಂದಿನ ಬದುಕಿನ ಮೇಲೆ ಟೋಲ್ ಪರಿಣಾಮ ಬೀರುವುದಿಲ್ಲ. ಅವರು ದೂರ ತೆರಳ ಬೇಕಾದಾಗ, ಮಹಾನಗರದ ವಾಹನ ದಟ್ಟಣೆಯ ಬದಲು ಸ್ವಲ್ಪ ಹೆಚ್ಚು ದುಡ್ಡು ತೆತ್ತು ಟೋಲ್ ಹಾದಿಯ ಮೂಲಕ ವೇಗವಾಗಿ ಕ್ರಮಿಸಲು ಮನಸ್ಸು ಮಾಡುತ್ತಾರೆ. ಆದರೆ ಕರ್ನಾಟಕದ ಕರಾವಳಿಯಂತಹ ಭಾಗಗಳಲ್ಲಿ ಪರಿಸ್ಥಿತಿ ವಿಭಿನ್ನ. ಹಾಗಾಗಿ ಇಲ್ಲಿ ಟೋಲ್ ಹೊರೆ ಎದ್ದು ಕಾಣಿಸತೊಡಗಿದೆ.
ಕರಾವಳಿಯಲ್ಲಿ ಎನ್‌ಎಚ್ 66 ಉದ್ದಕ್ಕೂ ಪಟ್ಟಣಗಳು, ಗ್ರಾಮಗಳು ಅಭಿವೃದ್ಧಿಗೊಂಡಿರುವುದೇ ರಾಷ್ಟ್ರೀಯ ಹೆದ್ದಾರಿಯನ್ನು ಆಧರಿಸಿಕೊಂಡು. 40-50 ವರ್ಷಗಳ ಹಿಂದೆ ನಮ್ಮೂರಲ್ಲಿ ಹಾದುಹೋಗಲಿರುವ ಹೆದ್ದಾರಿ ಎಂದು ರಸ್ತೆಗೆ ತಮ್ಮ ಜಾಗ ಬಿಟ್ಟುಕೊಟ್ಟವರು, ಆ ಬಳಿಕ ಪ್ರತೀ ವಾಹನ ಖರೀದಿಸಿದಾಗಲೂ ರಾಜ್ಯ ಸರಕಾರಕ್ಕೆ ರಸ್ತೆ ತೆರಿಗೆ ಕಟ್ಟಿದವರು ಈಗ ಮತ್ತೆ ರಸ್ತೆಗಿಳಿಯಲು ಟೋಲ್ ಕೊಡಿ ಎಂದು ಹೇಳಿದಾಗ ಕಂಗಾಲಾಗುವುದು ಸಹಜವೇ. ಏಕೆಂದರೆ ಕರಾವಳಿಯಲ್ಲಿ ಈವತ್ತಿಗೂ ಸಂಚಾರ-ಸಂಪರ್ಕದ ಬಹುಪಾಲು ನಡೆಯುವುದು ರಾಷ್ಟ್ರೀಯ ಹೆದ್ದಾರಿಯ ಮೂಲಕವೇ. ಮನೆಯಿಂದ ಹೊರಗೆ ರಸ್ತೆಗಿಳಿಯಲು ಟೋಲ್ ಕಟ್ಟಬೇಕೆಂದರೆ ಯಾರಿಗೂ ಅನ್ಯಾಯ ಅನ್ನಿಸುವುದು, ಅಸಹನೆ ಆಗುವುದು ಸಹಜ. ಕರಾವಳಿಯಲ್ಲಂತೂ ಟೋಲ್ ಪ್ರಾಕ್ಟಿಕಲ್ ಅಲ್ಲವೇ ಅಲ್ಲ. ಅದು ಜನರ ದೈನಂದಿನ ಬದುಕಿನ ಮೇಲೇ ಪ್ರಭಾವ ಬೀರುತ್ತದೆ. ಹಾಗಾದರೆ ಏನು ಪರ್ಯಾಯ?
1. ಕರ್ನಾಟಕದ ಕರಾವಳಿಯ ಬಹುತೇಕ ಎಲ್ಲ ಊರುಗಳಲ್ಲಿ ಮೀನುಗಾರಿಕಾ ರಸ್ತೆಗಳ ಸುಸಜ್ಜಿತ ಸಂಪರ್ಕ ಜಾಲವಿದೆ. ಆ ರಸ್ತೆಗಳ ಮಾಲಕತ್ವವನ್ನು ರಾಜ್ಯ ಲೋಕೋಪಯೋಗಿ ಇಲಾಖೆಯು ಮೀನುಗಾರಿಕೆ ಇಲಾಖೆಯದು ಎಂದೂ, ಮೀನುಗಾರಿಕಾ ಇಲಾಖೆಯು ಲೋಕೋಪಯೋಗಿಯದೆಂದೂ ‘‘ತು-ತು-ಮೈ-ಮೈ’’ ಮಾಡಿಕೊಂಡು, ಒಟ್ಟಾರೆ ಇಡಿಯ ರಸ್ತೆಜಾಲ ಈಗ ಹಾಳುಬಿದ್ದಿದೆ. ಜನ ಈಗ ಮಾಡಬಹುದಾದದ್ದೇನೆಂದರೆ, ನಾವು ನಮ್ಮ ವಾಹನ ಖರೀದಿ ಮಾಡಿದಾಗ ದೊಡ್ಡ ಮೊತ್ತದ ರಸ್ತೆ ತೆರಿಗೆ ಕಟ್ಟಿರುವ ರಾಜ್ಯಸರಕಾರದ ಬಳಿ, ನಾವು ಕಟ್ಟಿದ ತೆರಿಗೆಗೆ ಪ್ರತಿಯಾಗಿ, ನಮಗೆ ಸಮರ್ಪಕವಾದ ರಸ್ತೆಗಳು ಬೇಕೆಂದು ಬೇಡಿಕೆ ಇಟ್ಟು, ಕರಾವಳಿಯ ಮೀನುಗಾರಿಕಾ ರಸ್ತೆ ಜಾಲವನ್ನು ಮತ್ತೆ ಸುಸಜ್ಜಿತಗೊಳಿಸಿಕೊಳ್ಳುವುದು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ದುಡ್ಡು ತೆತ್ತು ಟೋಲ್ ಹೆದ್ದಾರಿಯನ್ನು ಬಳಸುವುದು.
2. ಹೆದ್ದಾರಿ ಹಾದು ಹೋಗುವ ಎಲ್ಲ ಕಡೆಗಳಲ್ಲಿ ಕಡ್ಡಾಯವಾಗಿ ನೂರಕ್ಕೆ ನೂರು ಸರ್ವೀಸ್ ರಸ್ತೆಗಳನ್ನು ಹೊಂದುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸುವುದು. ಈ ಎಲ್ಲ ಸರ್ವೀಸ್ ರಸ್ತೆಗಳೂ ಸಹಜವಾಗಿಯೇ ಮೀನುಗಾರಿಕಾ ರಸ್ತೆಗಳನ್ನು ಸಂಪರ್ಕಿಸುತ್ತವೆ. ಅವುಗಳ ಮೂಲಕ ನಿರಾಳವಾದ, ಟೋಲ್ ಮುಕ್ತ ಸಂಚಾರ ಸಾಧ್ಯವಿದೆ. ಎಲ್ಲ ಕಡೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿದರೆ ಟೋಲ್ ರಸ್ತೆಯಲ್ಲಿ ಜನ ಬರುವುದಿಲ್ಲ. ಹಾಗಾಗಿ ಸರ್ವೀಸ್ ರಸ್ತೆಗಳನ್ನು ಎಲ್ಲ ಜಾಗಗಳಲ್ಲಿ ನಿರ್ಮಿಸಬಾರದು ಎಂಬ ಸರಕಾರಿ ನೀತಿ ಇದೆ ಎಂಬ ವದಂತಿಗಳು ಕೇಳಿಬಂದದ್ದಿದೆ. ಇತ್ತೀಚೆಗೆ ಹೆದ್ದಾರಿ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯೊಂದರಲ್ಲಿ ಅಧಿಕೃತವಾಗಿಯೇ ಹಾಗೆ ಹೇಳಿದ್ದು ವರದಿ ಆಗಿತ್ತು. ಅದು ಹೌದೆಂದಾದರೆ, ಸರಕಾರಿ ನೀತಿಯನ್ನು ಬದಲಾಯಿಸಲು ಜನರು ಒತ್ತಡ ಹೇರಬೇಕಾಗುತ್ತದೆ ಮತ್ತು ಹೆದ್ದಾರಿ ಖಾಸಗೀಕರಣಗೊಂಡರೆ, ಸರ್ವೀಸ್ ರಸ್ತೆ ನಮ್ಮ ಹಕ್ಕು; ಖಾಸಗೀಕರಣ ಎಂದರೆ ಕೇವಲ ಖಾಸಗಿಯವರ ಬೊಕ್ಕಸ ತುಂಬಿಸುವುದಲ್ಲ. ಅದರ ಅಂತಿಮ ಫಲಾನುಭವಿಗಳಾಗಬೇಕಾದವರು ದೇಶದ ಜನ ಎಂಬುದನ್ನು ಸರಕಾರಕ್ಕೆ ಮನದಟ್ಟು ಮಾಡಿಸುವುದು ಅನಿವಾರ್ಯವಾಗುತ್ತದೆ.
3. ಕೇಂದ್ರ ಸರಕಾರವು ರಾಜ್ಯದ ಒಳಗೆ ಹೆದ್ದಾರಿಗಳಲ್ಲಿ ಸಂಗ್ರಹಿಸುವ ಟೋಲ್ ವರಮಾನ, ರಾಜ್ಯದ ಒಳಗೆ ಪೆಟ್ರೋಲ್-ಡೀಸೆಲ್ ಮಾರಾಟದಲ್ಲಿ ಪ್ರತೀ ಲೀಟರಿನ ಮೇಲೆ ರಸ್ತೆ ಅಭಿವೃದ್ಧಿಗೆಂದು ಸರಕಾರ ಪ್ರತೀ ತಿಂಗಳು ಸಂಗ್ರಹಿಸುತ್ತಿರುವ ಸಾವಿರಾರು ಕೋಟಿ ರೂ.ಗಳ ಆದಾಯ ಹಾಗೂ ರಾಜ್ಯದಲ್ಲಿ ಸಂಗ್ರಹವಾದ ಜಿಎಸ್‌ಟಿ ಪಾಲಿನಲ್ಲಿ ಭಾರತ ಸರಕಾರವು ವಾಪಸ್ ನೀಡುವ ಮೊತ್ತದಲ್ಲಿ ನಮ್ಮ ರಾಜ್ಯದ ಜಿಎಸ್‌ಟಿ ಸಂಗ್ರಹದ ಪ್ರಮಾಣಕ್ಕೆ ಅನುಗುಣವಾದ ಒಂದು ಮೊತ್ತವನ್ನು ಕೇಂದ್ರ ಸರಕಾರವು ನಿರ್ದಿಷ್ಟವಾಗಿ ಮೂಲಸೌಕರ್ಯಗಳಿಗೆಂದೇ ವಾಪಸ್ ಕೊಡಬೇಕು. ಹಾಗೆ ಮೂರು ಮೂಲಗಳಿಂದ ಒಂದು ಒಟ್ಟು ಮೊಬಲಗು ವಾಪಸ್ ಸಿಕ್ಕಿದಲ್ಲಿ, ಐದೇ ವರ್ಷಗಳ ಒಳಗೆ ರಾಜ್ಯದಲ್ಲಿ ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳನ್ನೆಲ್ಲ ಸುಸಜ್ಜಿತಗೊಳಿಸಿ, ಮೇಲ್ದರ್ಜೆಗೆ ಏರಿಸಿ, ರಾಜ್ಯದ ಒಳಗೆ ಯಾವುದೇ ಟೋಲ್ ಇಲ್ಲದೆ ಸುಗಮವಾಗಿ ಸಂಚರಿಸುವ ಕನಸು ಕಾಣುವುದು ಸಾಧ್ಯವಿದೆ. ಕೇಂದ್ರ ಸರಕಾರದ ಕುಳಿತು ಉಣ್ಣುವ ಯೋಜನೆಗಳಿಗೆ ಕಡಿವಾಣ ಬಿದ್ದು; ಒಕ್ಕೂಟ ವ್ಯವಸ್ಥೆಯ ನಿಜ ಅರ್ಥದ ಕೊಡುಕೊಳ್ಳುವಿಕೆ ಸಂಭವಿಸುವುದೂ ಸಾಧ್ಯವಿದೆ.







