ಬಟಿಂಡಾ ಮಿಲಿಟರಿ ಸ್ಟೇಷನ್ ನಲ್ಲಿ ಗುಂಡಿನ ದಾಳಿ: ಕನಿಷ್ಠ ನಾಲ್ವರು ಮೃತ್ಯು

ಬಟಿಂಡಾ: ಪಂಜಾಬ್ ನ ಬಟಿಂಡಾ ಮಿಲಿಟರಿ ಸ್ಟೇಶನ್ ನಲ್ಲಿ ಬುಧವಾರ ಮುಂಜಾನೆ ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ ಕನಿಷ್ಠ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಟಿಂಡಾ ಮಿಲಿಟರಿ ಠಾಣೆಯೊಳಗೆ ಮುಂಜಾನೆ 04:35 ರ ಸುಮಾರಿಗೆ ಗುಂಡಿನ ದಾಳಿಯ ಘಟನೆ ವರದಿಯಾಗಿದೆ. ಸ್ಟೇಶನ್ ನ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ.
ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಚಲನವಲನವನ್ನು ನಿರ್ಬಂಧಿಸಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ವಿವರ ಕಲೆಹಾಕಲಾಗುತ್ತಿದೆ ಎಂದು ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.
ಎಸ್‌ಎಸ್‌ಪಿ ಬಟಿಂಡಾ ಪ್ರಕಾರ, "ಈ ಘಟನೆಯು ಭಯೋತ್ಪಾದಕ ದಾಳಿಯಲ್ಲ".
"ಇದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿಲ್ಲ. ಇದು ವೈಯಕ್ತಿಕ ಹತ್ಯೆಯ ಪ್ರಕರಣದಂತೆ ಕಾಣುತ್ತಿದೆ'' ಎಂದುಪಂಜಾಬ್ ಪೊಲೀಸ್ ಹಾಗೂ ಗುಪ್ತಚರ ಮೂಲಗಳು ತಿಳಿಸಿವೆ.
ಬಟಿಂಡಾ ಮಿಲಿಟರಿ ಠಾಣೆಯ ಫಿರಂಗಿ ಘಟಕದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಕುಟುಂಬಗಳು ಸಹ ವಾಸಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಬಟಿಂಡಾ ಕಂಟೋನ್ಮೆಂಟ್‌ನೊಳಗೆ ಪೊಲೀಸರಿಗೆ ಕೂಡ ಪ್ರವೇಶಿಸಲು ಅನುಮತಿ ಇಲ್ಲ ಎಂದು ಮೂಲಗಳು ತಿಳಿಸಿವೆ.







