ಕಾಂಗ್ರೆಸ್ ಆದೇಶ ಧಿಕ್ಕರಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಚಿನ್ ಪೈಲಟ್ ಇಂದು ದಿಲ್ಲಿಗೆ ಪಯಣ

ಹೊಸದಿಲ್ಲಿ: ರಾಜಸ್ಥಾನದಲ್ಲಿ ತನ್ನದೇ ಪಕ್ಷದ ನೇತೃತ್ವದ ಸರಕಾರದ ವಿರುದ್ಧ ಸಾರ್ವಜನಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಪಕ್ಷದ ನಾಯಕತ್ವದ ಆದೇಶವನ್ನು ಧಿಕ್ಕರಿಸಿದ ಮರುದಿನ, ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್(Sachin Pilot) ಇಂದು ದಿಲ್ಲಿಗೆ ತಲುಪಿದ್ದು, ಅವರು ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಪೈಲಟ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಇಲ್ಲಿಯವರೆಗೆ ನಿಗದಿಪಡಿಸಲಾಗಿಲ್ಲವಾದರೂ ಪಕ್ಷದ ಮೂಲಗಳು ಪೈಲಟ್ ಪಕ್ಷದ ನಾಯಕತ್ವವನ್ನು ಭೇಟಿ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕಾಗಿ ಅಶೋಕ್ ಗೆಹ್ಲೋಟ್ ಸರಕಾರವನ್ನು ಒತ್ತಾಯಿಸಲು ಮಂಗಳವಾರ ಸಚಿನ್ ಪೈಲಟ್ ನಡೆಸಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿತು. ಪೈಲಟ್ ಅವರ ಅಂತಹ ಯಾವುದೇ ನಡವಳಿಕೆಯು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ಹೇಳಿತ್ತು.
ಇಷ್ಟು ದಿನ ಮೌನವಾಗಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಸುದ್ದಿಗೋಷ್ಠಿ ಕರೆದಿದ್ದಾರೆ.
ಕಾಂಗ್ರೆಸ್ ಹೆಸರು ಅಥವಾ ಚಿಹ್ನೆ ಬಳಸದೆಯೇ ಪೈಲಟ್ ಅವರು ಮಂಗಳವಾರ ಜೈಪುರದಲ್ಲಿ ತಮ್ಮ ಪಕ್ಷದ ಪ್ರತಿಸ್ಪರ್ಧಿ ಅಶೋಕ್ ಗೆಹ್ಲೋಟ್ ಅವರನ್ನು ಗುರಿಯಾಗಿಟ್ಟುಕೊಂಡು ಬೆಂಬಲಿಗರೊಂದಿಗೆ ಒಂದು ದಿನ ಉಪವಾಸವನ್ನು ಆರಂಭಿಸಿದರು. ಗೆಹ್ಲೋಟ್ ಸರಕಾರವು ಬಿಜೆಪಿಯ ವಸುಂಧರಾ ರಾಜೆ ವಿರುದ್ಧದ ಆರೋಪಗಳಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪೈಲಟ್ ಆರೋಪಿಸಿದ್ದಾರೆ.
"ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಾವು ಜನರಿಗೆ ಭರವಸೆ ನೀಡಿದ್ದೇವೆ. ಕಾಂಗ್ರೆಸ್ ಸರಕಾರವು ಕ್ರಮ ತೆಗೆದುಕೊಳ್ಳಬೇಕೆಂದು ನಾನು ಬಯಸಿದ್ದೆ ಆದರೆ ನಾಲ್ಕು ವರ್ಷಗಳಿಂದ ಅದು ನಡೆದಿಲ್ಲ. ಭ್ರಷ್ಟಾಚಾರದ ವಿರುದ್ಧ ಈ ಹೋರಾಟ ಮುಂದುವರಿಯಲಿದೆ ಎಂದು ಪೈಲಟ್ ಹೇಳಿದ್ದಾರೆ.







