ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಚಿವ ಎಸ್.ಅಂಗಾರ

ಸುಳ್ಯ,ಎ.12: ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸುಳ್ಯದ ಶಾಸಕ, ಸಚಿವ ಎಸ್. ಅಂಗಾರ ಅವರು ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಅವರು ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು. ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲ ಬಾರಿಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದ ಸಚಿವ ಎಸ್.ಅಂಗಾರ ಅವರು ಬಳಿಕ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡುವರೆ ವರ್ಷದಿಂದ ಸಚಿವರಾಗಿದ್ದರು. ಸುಳ್ಯದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿದ್ದರು.