ಶಕುಂತಳಾ ಶೆಟ್ಟಿಗೆ ಟಿಕೇಟ್ ನಿರಾಕರಿಸಿದರೆ ಸಾಮೂಹಿಕ ರಾಜೀನಾಮೆ: ಮಹಿಳಾ ಕಾಂಗ್ರೆಸ್ ಎಚ್ಚರಿಕೆ

ಪುತ್ತೂರು,ಎ.12: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. ಇಲ್ಲಿ ಈ ಹಿಂದೆ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳ ಜೊತೆಗೆ ಪಕ್ಷದ ಸಂಘಟನೆಯ ಕೆಲಸವನ್ನೂ ಮಾಡಿದ್ದಾರೆ. ಈ ಭಾರಿ ಅವರಿಗೆ ಮತ್ತೆ ಸ್ಪರ್ಧಿಸಲು ಪಕ್ಷವು ಅವಕಾಶ ನೀಡಬೇಕು. ಅವಕಾಶ ನಿರಾಕರಿಸಿದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್‍ನ ಎಲ್ಲಾ ಪದಾಧಿಕಾರಿಗಳು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್ ಎಚ್ಚರಿಕೆ ನೀಡಿದ್ದಾರೆ.
ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಈ ಹಿಂದೆಯೇ ಪಕ್ಷದ ಹೈಕಮಾಂಡ್‍ಗೆ ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ನೀಡುವಂತೆ ಮಾದ್ಯಮಗಳ ಮೂಲಕ ಮನವಿ ಮಾಡಿದ್ದೆವು. ಆದರೆ ಇದೀಗ ಪಕ್ಷವು ಬೇರೆಯವರಿಗೆ ಟಿಕೇಟ್ ನೀಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಶಕುಂತಳಾ ಶೆಟ್ಟಿ ಅವರು ಬಲಿಷ್ಠಗೊಳಿಸಿದ್ದಾರೆ. ಮಹಿಳೆಯರ ಏಳಿಗೆಗಾಗಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಪಕ್ಷವು ಮಹಿಳೆಯರ ಕಡೆಗಣನೆ ಮಾಡುತ್ತಿರುವ ಸೂಚನೆ ಕಂಡು ಬರುತ್ತಿದೆ. ಅನುಭವಿ ರಾಜಕಾರಣಿಯಾಗಿರುವ ಶಕುಂತಳಾ ಶೆಟ್ಟಿ ಅವರು ಕೊನೆಯ ಬಾರಿಯಾಗಿ ಈ ಬಾರಿ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರಾದ ವಿಶಾಲಾಕ್ಷಿ ಬನ್ನೂರು, ವಿಲ್ಮಾ ಗೋನ್ಸಾಲ್ವಿಸ್, ಸುಧಾ ಕುಂಜತ್ತಾಯ ಮತ್ತು ಸೀತಾ ಭಟ್ ಉಪಸ್ಥಿತರಿದ್ದರು.







