ಆರೋಪಿಯು ತಾರೆ ಎಂದ ಮಾತ್ರಕ್ಕೆ ನ್ಯಾಯಾಂಗ ಪ್ರಕ್ರಿಯೆಗಳನ್ನು ಕಿರುಕುಳ ನೀಡಲು ಬಳಸಬಾರದು: ಬಾಂಬೆ ಹೈಕೋರ್ಟ್
ನಟ ಸಲ್ಮಾನ್ ಖಾನ್ ವಿರುದ್ಧ ಪತ್ರಕರ್ತನ ಬೆದರಿಕೆ ದೂರು ವಜಾ

ಮುಂಬೈ: 2019ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಪತ್ರಕರ್ತರೊಬ್ಬರು ದಾಖಲಿಸಿದ್ದ ಬೆದರಿಕೆಯ ದೂರನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್, ಆರೋಪಿ ತಾರೆ ಎಂದ ಮಾತ್ರಕ್ಕೆ ಆತನಿಗೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಅನಗತ್ಯ ಕಿರುಕುಳ ನೀಡಬಾರದು ಎಂದು ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟಿದೆ.
ಮಾರ್ಚ್ 30ರಂದು ಸಲ್ಮಾನ್ ಖಾನ್ ಹಾಗೂ ಅವರ ಅಂಗರಕ್ಷಕ ನವಾಝ್ ಶೇಖ್‌ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದ್ದ ನ್ಯಾ. ಭಾರತಿ ಡಾಂಗ್ರೆ, ಅವರ ವಿರುದ್ಧ ಕೆಳ ನ್ಯಾಯಾಲಯದ ವಿಚಾರಣೆ ಹಾಗೂ ಸಮನ್ಸ್ ಜಾರಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ.
ಮಂಗಳವಾರ ಲಭ್ಯವಾಗಿರುವ ವಿಸ್ತೃತ ತೀರ್ಪಿನಲ್ಲಿ, ಸಮನ್ಸ್ ಜಾರಿ ಮಾಡುವಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಡ್ಡಾಯ ನಿಯಮಾವಳಿಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ.
"ಆರೋಪಿಯು ಹೆಸರಾಂತ ತಾರೆ ಎಂಬ ಕಾರಣಕ್ಕೆ ಕಾನೂನಿನ ನಿಯಮಾವಳಿಗಳನ್ನು ಪಾಲಿಸದೆ ಆತನನ್ನು ದೂರುದಾರರಿಂದ ಶೋಷಿಸಲು ಅನಗತ್ಯ ಕಿರುಕುಳದ ಸಾಧನವಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ಬಳಸಬಾರದು. ತನ್ನ ಸೇಡನ್ನು ಹಾಗೂ ತಾನು ಸಿನೆಮಾ ತಾರೆಯಿಂದ ಅವಮಾನಿತನಾಗಿದ್ದೇನೆ ಎಂಬ ಆತನ ಕಲ್ಪನೆಯನ್ನು ತೃಪ್ತಿಪಡಿಸಲು ಈ ಪ್ರಕ್ರಿಯೆಯಲ್ಲಿ ನ್ಯಾಯಾಂಗ ಯಂತ್ರವನ್ನು ಬಳಸಿಕೊಳ್ಳಬಾರದು" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟಿದೆ.
"ಅರ್ಜಿದಾರರಿಗೆ (ಸಲ್ಮಾನ್ ಖಾನ್ ಮತ್ತು ಶೇಖ್) ಸಮನ್ಸ್ ಜಾರಿ ಮಾಡಿರುವ ಪ್ರಕ್ರಿಯೆ ಹಾಗೂ ವಿಚಾರಣೆಯ ಮುಂದುವರಿಕೆ ನ್ಯಾಯಾಂಗ ಪ್ರಕ್ರಿಯೆಯ ನಿಂದನೆಗಿಂತ ಕಡಿಮೆಯಲ್ಲ" ಎಂದೂ ನ್ಯಾಯಾಧೀಶರು ಹೇಳಿದ್ದಾರೆ.
ಎಪ್ರಿಲ್, 2019ರಲ್ಲಿ ಪತ್ರಕರ್ತ ಅಶೋಕ್ ಪಾಂಡೆ ಮುಂಬೈ ರಸ್ತೆಯಲ್ಲಿ ಸಲ್ಮಾನ್ ಖಾನ್ ಬೈಸಿಕಲ್ ಸವಾರಿ ಮಾಡುತ್ತಿರುವುದನ್ನು ಚಿತ್ರೀಕರಿಸಿದ್ದಕ್ಕೆ ಸಲ್ಮಾನ್ ಖಾನ್ ಹಾಗೂ ಶೇಖ್ ನನ್ನನ್ನು ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಘಟನೆಯ ಸಂದರ್ಭದಲ್ಲಿ ನಾನು ಪಾಂಡೆಯನ್ನು ನಿಂದಿಸಿರಲಿಲ್ಲ ಎಂದು ಸಲ್ಮಾನ್ ಖಾನ್ ಅರ್ಜಿಯಲ್ಲಿ ವಾದಿಸಿದ್ದರು.
ಆದರೆ, ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರ ವರದಿಯನ್ನು ಆಧರಿಸಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಆರ್.ಖನ್ನಾ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 504 (ಉದ್ದೇಶಪೂರ್ವಕವಾಗಿ ಅವಮಾನಗೊಳಿಸಿ ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶ) ಹಾಗೂ 506 (ಅಪರಾಧ ಬೆದರಿಕೆ) ಅಡಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.
ಒಂದು ವೇಳೆ ದೂರಿನಲ್ಲಿ ಮೇಲ್ನೋಟದ ಸಾಕ್ಷಿಗಳು ದೊರೆತರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸುತ್ತದೆ.







