ಎ.15 ರಂದು ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ನಾಮಪತ್ರ ಸಲ್ಲಿಕೆ

ಬಂಟ್ವಾಳ : ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎ.15 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಪಾದಯಾತ್ರೆಯ ಮೂಲಕ ಬಿಸಿರೋಡು ವರೆಗೆ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದರು.
ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಎ.15 ರಂದು ಬೆಳಿಗ್ಗೆ 8 ಗಂಟೆಗೆ ದೇವಿಗೆ ಪೂಜೆ ಸಲ್ಲಿಸಿ 8.30 ಕ್ಕೆ ಕಾರ್ಯಕರ್ತರ ಜೊತೆ ಹೊರಡಲಿದ್ದೇವೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಪಕ್ಷದ ಸೂಚನೆಯಂತೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಎ.15ರ ವಿಷು ಹಬ್ಬದ ದಿನವಾದ ಶನಿವಾರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಅವರು ತಿಳಿಸಿದರು.
ಕ್ಷೇತ್ರದ ಜನರಿಗೆ ಶಾಂತಿ ನೆಮ್ಮದಿಯ ಸಮೃದ್ಧಿಯ ಬಂಟ್ವಾಳ ಬೇಕಾಗಿದೆ, ಹಾಗಾಗಿ ಕೇಂದ್ರ ,ರಾಜ್ಯದ ಯೋಜನೆಗಳು ಮತ್ತು ಅಭಿವೃದ್ಧಿ ಜೊತೆಗೆ ಶಾಂತಿಯ ಬಂಟ್ವಾಳವನ್ನು ಉಳಿಸಿಕೊಳ್ಳಲು ಮತ್ತೆ ಬಿಜೆಪಿಗೆ ಬೆಂಬಲ ನೀಡುತ್ತಾರೆ, ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತಕ್ಕೆ ಬರುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ 59 ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಷೇತ್ರದ ಮತದಾರರ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ರಾಜೇಶ್ ನಾಯ್ಕ್ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಲಿದ್ದೇವೆ. 2023 ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುವುದು ನಿಶ್ಚಿತ, 30 ಸಾವಿರ ಮತಗಳ ಅಂತರಗಳಿಂದ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಯೋಚನೆಯಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರವಿಶಂಕರ್ ಮಿಜಾರು, ದೇವದಾಸ್ ಶೆಟ್ಟಿ, ಡೊಂಬಯ್ಯ ಅರಳ ಉಪಸ್ಥಿತರಿದ್ದರು.