ಶತಮಾನ ವರ್ಷದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಪ್ರಯತ್ನ: ಪ್ರದೀಪ್ ಕುಮಾರ್
ಕರ್ಣಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿ ಕಟ್ಟಡ ಉದ್ಘಾಟನೆ

ಉಡುಪಿ, ಎ.12: ಶತಮಾನದ ವರ್ಷದಲ್ಲಿರುವ ಕರ್ಣಾಟಕ ಬ್ಯಾಂಕ್‌ನ್ನು ಮುಂದಿನ ಶತಮಾನದ ಹಾದಿಯಲ್ಲಿ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನದಲ್ಲಿ ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಪ್ರದೀಪ್ ಕುಮಾರ್ ಹೇಳಿದ್ದಾರೆ.
ನಗರದ ಅಂಬಾಗಿಲಿನಲ್ಲಿ ಕರ್ಣಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಹಾಗೂ ಅಂಬಾಗಿಲು ಶಾಖೆಯ ಸ್ಥಳಾಂತರ ಮತ್ತು ಮಿನಿ ಇ-ಲಾಬಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ಪ್ರಾದೇಶಿಕ ಕಚೇರಿಯ ನೂತನ ಪ್ರಾಂಗಣವನ್ನು ಉದ್ಘಾಟಿಸಿದ ಅವರು ಮುಂದಿನ ಶತಮಾನದ ದೂರದೃಷ್ಟಿಯ ಪಥದಲ್ಲಿ ಬ್ಯಾಂಕು, ಈವರೆಗಿನ ಸಾಧನೆಯನ್ನಷ್ಟೇ ನೆಚ್ಚಿಕೊಳ್ಳದೇ, ಉಳಿದ 43 ಬ್ಯಾಂಕುಗಳಿಂದ ಬರುವ ಎಲ್ಲಾ ರೀತಿಯ ಸ್ಪರ್ಧೆಗಳನ್ನು ಎದುರಿಸಿ ಉತ್ತಮ ಉತ್ಪನ್ನ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಪ್ರಗತಿಯತ್ತ ಸಾಗಬೇಕು. ಇದಕ್ಕೆ ಬ್ಯಾಂಕಿನ ಸಿಬ್ಬಂದಿಗಳಿಗೆ ಸಂಸ್ಥೆಯ ವಿವಿಧ ಉತ್ಪನ್ನಗಳ ಕುರಿತು ಸರಿಯಾದ ಮಾಹಿತಿ ಇದ್ದು, ಕಾಲಕ್ಕನುಗುಣವಾಗಿ ತಂತ್ರಜ್ಞಾನ ಮೇಲ್ದರ್ಜೆ ಗೇರಬೇಕು ಎಂದರು.
ಸ್ಥಳಾಂತರಿತ ಅಂಬಾಗಿಲು ಅಂಬಾಗಿಲು ಶಾಖೆ ಆವರಣ ಹಾಗೂ ಮಿನಿ ಇ-ಲಾಬಿಯನ್ನು ಲೋಕಾರ್ಪಣೆ ಗೊಳಿಸಿದ ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ, ದೇಶದ 43 ಬ್ಯಾಂಕುಗಳ ಪೈಕಿ ಶತಮಾನವನ್ನು ಪೂರೈಸಿರುವ 15 ಬ್ಯಾಂಕುಗಳಲ್ಲಿ ನಿರಂತರವಾಗಿ 100 ವರ್ಷವೂ ಲಾಭಗಳಿಸಿದ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆ ಕರ್ಣಾಟಕ ಬ್ಯಾಂಕಿಗಿದೆ ಎಂದರು.
ಅವರು ಬುಧವಾರ ನೆರವೇರಿಸಿ ಮಾತನಾಡಿ, ಹಲ್ಸನಾಡು, ಕಕ್ಕುಂಜೆ ಕುಟುಂಬದ ಮೂರು ತಲೆಮಾರಿನ ಜನರು ಬ್ಯಾಂಕಿನ ನಿರ್ದೇಶಕರಾಗಿದ್ದಾರೆ ಎಂದರು.
ಕರ್ಣಾಟಕ ಬ್ಯಾಂಕ್ ಮಂಗಳೂರಿನಲ್ಲಿ ಪ್ರಾರಂಭಗೊಂಡರೂ, 1934ರಲ್ಲಿ ಬ್ಯಾಂಕಿನ ತೃತೀಯ ಶಾಖೆ ತೆರೆದುದು ಶ್ರೀಕೃಷ್ಣ ಮಠ ಪರಿಸರದ ರಥಬೀದಿ ಯಲ್ಲಿ. ಅಂದು ಪ್ರಾರಂಭಗೊಂಡ ಶ್ರೀಕೃಷ್ಣಮಠ, ಅಷ್ಟಮಠಗಳೊಂದಿಗಿನ ನಮ್ಮ ಸಂಬಂಧ, 1970ರಲ್ಲಿ ಸೂರ್ಯನಾರಾಯಣ ಅಡಿಗರು ಪರ್ಯಾಯ ಪೀಠವೇರುವ ಯತಿಯನ್ನು ಬ್ಯಾಂಕಿಗೆ ಕರೆಸಿ ಗೌರವ ಸಲ್ಲಿಸುವ ಪರಂಪರೆ ಇಂದಿಗೂ ಮುಂದುವರಿದಿದೆ ಎಂದರು.
ಬ್ಯಾಂಕಿನ ಉದ್ಯೋಗಿಗಳು ನಿನ್ನೆ ತನ್ನ ಜನ್ಮದಿನದ ಸಂದರ್ಭದಲ್ಲಿ 5 ಲಕ್ಷ ಎನ್‌ಪಿಎ ಖಾತೆಯನ್ನು ಅನುತ್ಪಾದಕ ಆಸ್ತಿ ರಹಿತವಾಗಿ ರೂಪಿಸುವ ಮೂಲಕ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಂಬಾಗಿಲು ಕರ್ಣಾಟಕ ಬ್ಯಾಂಕ್ ಕಟ್ಟಡವನ್ನು ಉದ್ಘಾಟಿಸಿದ ನಿಟ್ಟೆ ಡೀಮ್ಡ್ ವಿವಿಯ ಕುಲಪತಿ ಹಾಗೂ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್. ವಿನಯ ಹೆಗ್ಡೆ ಮಾತನಾಡಿ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅಡಿಗ ಸೇರಿದಂತೆ ವಿವಿಧ ಅಧ್ಯಕ್ಷರೊಂದಿಗಿನ ತಮ್ಮ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡರು. ಶತಮಾನ ಸಂಭ್ರಮದಲ್ಲಿರುವ ಈ ಬ್ಯಾಂಕು ಶ್ರೇಷ್ಠ ಬ್ಯಾಂಕಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಡಾ.ಜಿ.ಶಂಕರ್, ಆನಂದ ಕುಂದರ್, ಜೆರ್ರಿ ವಿನ್ಸೆಂಟ್ ಡಯಾಸ್, ಡಾ.ಎಚ್.ಎಸ್. ಬಲ್ಲಾಳ್, ಶತಾಯುಷಿ ಕಲ್ಯಾಣಿ ಅಮ್ಮ ಸೇರಿದಂತೆ ಬ್ಯಾಂಕಿನ 100 ಮಂದಿ ಅಗ್ರಗಣ್ಯ ಗ್ರಾಹಕರನ್ನು ಬ್ಯಾಂಕಿನ ವತಿಯಿಂದ ಗೌರವಿಸಲಾಯಿತು.
ಪ್ರಾರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ರಾಜಗೋಪಾಲ ಬಿ. ಮಾತನಾಡಿ, ಉಡುಪಿ, ಉತ್ತರ ಕನ್ನಡ ವ್ಯಾಪ್ತಿಯಲ್ಲಿ 34 ಗ್ರಾಮೀಣ, 25 ಪಟ್ಟಣ, ಅರೆ ಪಟ್ಟಣ ಸಹಿತ 59 ಶಾಖೆಗಳನ್ನು ಹೊಂದಿದ ಉಡುಪಿ ಪ್ರಾದೇಶಿಕ ಕಚೇರಿಯು 6,398ಕೋಟಿ ರೂ. ವ್ಯವಹಾರ ನಡೆಸಿದೆ. 4,594 ಕೋಟಿ ರೂ. ಠೇವಣಿ, 1,742ಕೋಟಿ ರೂ. ಮುಂಗಡ ನೀಡಿದೆ ಎಂದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ವಂದಿಸಿದರೆ, ಭಾಗ್ಯಶ್ರೀ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು.


