ಐಎಂಎ ಬಹುಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗೆ ಬಿಜೆಪಿ ಟಿಕೆಟ್

ಬೆಂಗಳೂರು, ಎ.12: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಂದಿನ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ಅವರಿಗೆ ಬಿಜೆಪಿ ಪಕ್ಷವೂ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿರುವುದು ಚರ್ಚಿಗೆ ಗ್ರಾಸವಾಗಿದೆ.
2019ನೆ ಸಾಲಿನಲ್ಲಿ ಐಎಂಎ ವಿರುದ್ಧ ನಡೆಸಿದ ತನಿಖೆಯಲ್ಲಿ ಕಂಪೆನಿ ಪರವಾಗಿ ವರದಿ ನೀಡಲು 4.5 ಕೋಟಿ ರೂ.ಲಂಚ ಪಡೆದ ಆರೋಪದ ಮೇಲೆ ಎಲ್.ಸಿ.ನಾಗರಾಜು ಅವರನ್ನು ಸಿಟ್ ತನಿಖಾ ತಂಡಬಂಧಿಸಿತ್ತು. ಅದು ಅಲ್ಲದೆ, ಐಎಂಎ ಕಂಪೆನಿಯಿಂದ ಹಲವು ಅಧಿಕಾರಿಗಳು ಕೋಟಿಗಟ್ಟಲೆ ಸುಲಿಗೆ ಮಾಡಿದ್ದಾರೆಂದು ಪ್ರಮುಖ ರೂವಾರಿ ಮನ್ಸೂರ್ ಖಾನ್ ತಾನೇ ಮಾಡಿದ್ದ ವಿಡಿಯೊದಲ್ಲಿ ಹೇಳಿಕೊಂಡಿದ್ದ. ಆನಂತರ, ಎಲ್.ಸಿ.ನಾಗರಾಜು ಸೇರಿ ಹಲವು ಅಧಿಕಾರಿಗಳು ಜೈಲು ಸೇರಿದ್ದರು.
ಅಷ್ಟೇ ಅಲ್ಲದೆ, 2021ರಲ್ಲಿ ನೆಲಮಂಗಲ ಪರಮಣ್ಣ ಬಡಾವಣೆಯಲ್ಲಿದ್ದ ಎಲ್.ಸಿ.ನಾಗರಾಜ್ ಮನೆ ಹಾಗೂ ಅವರ ಸಂಬಂಧಿಕರ ಮನೆ ಮೇಲೆಯೂ ಎಸಿಬಿ ದಾಳಿ ನಡೆಸಿತ್ತು. ಎಸಿಬಿ ಅಧಿಕಾರಿಗಳು ದಾಳಿ ವೇಳೆಯಲ್ಲಿ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಐಎಂಎ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲೂ ಎಲ್.ಸಿ ನಾಗರಾಜ್ ಹೆಸರಿದೆ.
ಇನ್ನೂ, ಕಳೆದ ವರ್ಷವಷ್ಟೇ ನಾಗರಾಜ್ ಅವರು ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದಾದ ಬಳಿಕ ರಾಜಕೀಯಕ್ಕೆ ಧುಮುಕಿದ ಅವರಿಗೆ ಬಿಜೆಪಿ ಮಧುಗಿರಿ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಇದರಿಂದ ಸ್ವಾಭಾವಿಕವಾಗಿಯೇ ರಾಜ್ಯ ಬಿಜೆಪಿ ಕಾರ್ಯಕರ್ತರು, ನಾಯಕರು ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.







