ಅಕ್ರಮ ನಿರ್ಮಾಣದ ಆರೋಪ: ಬಿಜೆಪಿ ಆಡಳಿತದ ಮಣಿಪುರದಲ್ಲಿ ಮೂರು ಚರ್ಚ್ ಗಳು ನೆಲಸಮ

ಹೊಸದಿಲ್ಲಿ,ಎ.12: ಬಿಜೆಪಿ ಆಡಳಿತವಿರುವ ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಂಗಳವಾರ ಅಧಿಕಾರಿಗಳು ಮೂರು ಚರ್ಚ್ಗಳನ್ನು ನೆಲಸಮಗೊಳಿಸಿದ್ದಾರೆ. ಈ ಚರ್ಚ್ಗಳನ್ನು ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಆರೋಪದಲ್ಲಿ ಧ್ವಂಸಗೊಳಿಸಲಾಗಿದ್ದು,ಈ ಪೈಕಿ ಒಂದು ಚರ್ಚ್ 1974ರಿಂದಲೂ ಅಸ್ತಿತ್ವದಲ್ಲಿತ್ತು. ಮಣಿಪುರದ ಶೇ.41ಕ್ಕೂ ಹೆಚ್ಚಿನ ಜನರು ಕ್ರೈಸ್ತರಾಗಿದ್ದಾರೆ ಎಂದು thewire.in ವರದಿ ಮಾಡಿದೆ.
ಬುಡಕಟ್ಟು ಕಾಲನಿಯಲ್ಲಿ ಮಂಗಳವಾರ ನಸುಕಿನಲ್ಲಿ ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಚರ್ಚ್ಗಳನ್ನು ಧ್ವಂಸಗೊಳಿಸಲಾಗಿದೆ. ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ 2020ರಲ್ಲಿ ಹೊರಡಿಸಿದ್ದ ತನ್ನ ಆದೇಶವನ್ನು ಮಣಿಪುರ ಉಚ್ಚ ನ್ಯಾಯಾಲಯವು ತೆರವುಗೊಳಿಸಿದ ಬೆನ್ನಲ್ಲೇ ಚರ್ಚ್ ಗಳನ್ನು ನೆಲಸಮಗೊಳಿಸಲಾಗಿದೆ.
ಚರ್ಚ್ ಗಳ ನೆಲಸಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು, ಕಾರ್ಯಾಚರಣೆಯು ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಚರ್ಚ್ ಗಳ ನೆಲಸಮ ಕಾರ್ಯವನ್ನು ಆರಂಭಿಸಿದಾಗ ಸ್ಥಳದಲ್ಲಿ ಜಮಾಯಿಸಿದ್ದ ಹಲವಾರು ಸ್ಥಳೀಯ ಕ್ರೈಸ್ತರು ಅವಶೇಷಗಳ ನಡುವೆಯೇ ಪ್ರಾರ್ಥನೆಗಳನ್ನು ಸಲ್ಲಿಸಿದರು.
ಈ ಚರ್ಚ್ಗಳು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವೈಯಕ್ತಿಕ ಲಾಭಕ್ಕಾಗಿರಲಿಲ್ಲ, ರಾಜ್ಯ ಸರಕಾರವು ಅವುಗಳನ್ನು ನೆಲಸಮ ಮಾಡಬಾರದಿತ್ತು ಎಂದು ಕ್ರೈಸ್ತ ಧರ್ಮಗುರುಗಳೋರ್ವರು ಹೇಳಿದರು.
ರವಿವಾರ ಈಸ್ಟರ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯ ಸೇಕ್ರೆಡ್ ಹಾರ್ಟ್ ಕೆಥೆಡ್ರಲ್ ಚರ್ಚ್ಗೆ ಭೇಟಿ ನೀಡಿದ್ದರು. ದೇಶದ ವಿವಿಧ ಭಾಗಗಳಲ್ಲಿ ಹಿಂದುತ್ವ ಸಂಘಟನೆಗಳಿಂದ ಚರ್ಚ್ ಗಳು ಮತ್ತು ಪ್ಯಾಸ್ಟರ್ಗಳ ಮೇಲೆ ದಾಳಿಗಳ ವರದಿಗಳ ಕುರಿತಂತೆ ಈವರೆಗೆ ಅವರು ಮೌನವನ್ನು ಮುರಿದಿಲ್ಲ.







