ಎ.13ರಿಂದ ದ.ಕ. ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆ ಆರಂಭ: ಡಿಸಿ ರವಿಕುಮಾರ್

ಮಂಗಳೂರು, ಎ.12: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರಗಳ ಸ್ವೀಕಾರ ದ.ಕ.ಜಿಲ್ಲೆಯಲ್ಲಿ ಎ.13ರಿಂದ ಆರಂಭಗೊಳ್ಳುತ್ತಿದ್ದು, ಎ.14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ನೆಗೋಷಿಯಬಲ್ ಇಸ್ಟ್ರುಮೆಂಟಲ್ ಕಾಯಿದೆಯಡಿ ಅಂದು ರಜೆ ಇರುವ ಕಾರಣ ನಾಮಪತ್ರ ಸ್ವೀಕರಿಸಲು ಅವಕಾಶವಿರುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಚುನಾವಣೆಗೆ ಸಂಬಂಧಿಸಿ ಮಾಡಿರುವ ತಯಾರಿಯ ಬಗ್ಗೆ ವಿವರಿಸಿದರು.
ನಾಮಪತ್ರ ಸಲ್ಲಿಸಲು ಎ. 20ರಂದು ಕೊನೆಯ ದಿನವಾಗಿರುತ್ತದೆ. ಎ. 21ನಾಮಪತ್ರ ಪರಿಶೀಲನೆ ಹಾಗೂ ಎ.24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲ ಮತದಾರರು ಒಟ್ಟು 60,934 ಮಂದಿ ಇದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರು 38,294 ಇದ್ದರೆ, 90 ವರ್ಷ ಮೇಲ್ಪಟ್ಟ ಮತದಾರರು 8,102 ಮಂದಿ, 100 ವರ್ಷ ಮೇಲ್ಪಟ್ಟ ಮತದಾರರು 531 ಮಂದಿ, 14,007 ವಿಕಲಚೇತನ ಮತದಾರರಿದ್ದಾರೆ. ಇವರೆಲ್ಲರಿಗೆ 12ಡಿ ನಮೂನೆಗಳನ್ನು ನೀಡಿದ ನಂತರ, ಅವರು ಅಂಚೆ ಮತದಾನಕ್ಕೆ ಒಪ್ಪಿಗೆ ಸೂಚಿಸಿದರೆ ಮನೆಗೇ ತೆರಳಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
80 ವರ್ಷ ಮೇಲ್ಪಟ್ಟವರು, ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಈ ವರ್ಗದ ಶೇ.84ರಷ್ಟು ಮಂದಿಗೆ ಅಂಚೆ ಮತದಾನಕ್ಕೆ ಒಪ್ಪಿಗೆ ಪಡೆಯಲು 12ಡಿ ಫಾರಂಗಳನ್ನು ನೀಡಲಾಗಿದೆ. ಮೂರು ದಿನಗಳಲ್ಲಿ 12ಡಿ ನಮೂನೆಗಳ ವಿತರಣೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.
ಈ ಬಾರಿ 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನ ಮತದಾರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅಂಚೆ ಮತ ಪತ್ರ ಸೌಲಭ್ಯ ಒದಗಿಸುವ ಸಂಬಂಧ ನೋಡಲ್ ಅಧಿಕಾರಿಯನ್ನಾಗಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಈ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ, ಶಾಂತಿಯುತವಾಗಿ ಮತ್ತು ನಿಷ್ಪಕ್ಷಪಾತ ವಾಗಿ ಜರಗಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಲಾಗಿದೆ.
*17.68 ಲಕ್ಷ ಮತದಾರರು: ಕಳೆದ ಎಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ನೋಂದಣಿಗೆ ಅವಕಾಶ ನೀಡಲಾಗಿದ್ದು, ಜಿಲ್ಲೆಯಲ್ಲಿ ಇದೀಗ ಅಂತಿಮವಾಗಿ ಒಟ್ಟು 17,68,031 ಮತದಾರರಿದ್ದಾರೆ. ಅದರಲ್ಲಿ 9,03,068 ಮಹಿಳಾ ಮತದಾರರು, 8,64,885 ಪುರುಷ ಮತದಾರರು ಮತ್ತು 78 ಲಿಂಗತ್ವ ಅಲ್ಪಸಂಖ್ಯಾತರು. 18ರಿಂದ 19 ವರ್ಷದೊಳಗಿನ ಒಟ್ಟು 37,292 ಯುವ ಮತದಾರರಿದ್ದಾರೆ. ಬಂಟ್ವಾಳದಲ್ಲಿ ಅತಿ ಹೆಚ್ಚು ಅಂದರೆ 5266 ಯುವ ಮತದಾರರಿದ್ದಾರೆ ಎಂದು ವಿವರಿಸಿದರು.
8,503 ಮಂದಿಗೆ ಗುರುತಿನ ಚೀಟಿ : ಒಂದು ತಿಂಗಳಲ್ಲಿ 82,503 ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಗುರುತಿನ ಚೀಟಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ. ವಿತರಣೆಯಾಗದ ಸ್ಪೀಡ್ ಪೋಸ್ಟ್‌ಗಳನ್ನು ಚುನಾವಣಾಧಿ ಕಾರಿಗಳು ಸಂಗ್ರಹಿಸಿ ನಂತರ ಬಿಎಲ್‌ಒಗಳ ಮೂಲಕ ಮತದಾರರಿಗೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕಂಟ್ರೋಲ್ ರೂಂ ನಂಬ್ರ1950: ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಇದರ ದೂರವಾಣಿ ನಂಬ್ರ 1950 ಟೋಲ್ ಫ್ರೀ ನಂಬರ್. ಈ ಕಂಟ್ರೋಲ್ ರೂಮ್ ದಿನದ 24 ಗಂಟೆಗಳು ಕಾರ್ಯಚರಣೆ ನಡೆಸುತ್ತಿದ್ದು ಚುನಾವಣೆಗೆ ಸಂಬಂಧಿಸಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಈ ಕಂಟ್ರೋಲ್ ರೂಮ್ ಗೆ ದೂರು ನೀಡಬಹುದು ಹಾಗೂ ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಪಡೆಯಬಹುದು ಎಂದು ಹೇಳಿದರು.
ಡಾ.ಕುಮಾರ್ ನೋಡಲ್ ಅಧಿಕಾರಿ: ಜಿಲ್ಲೆಯಲ್ಲಿ ಚುನಾವಣಾ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆಗಳು ಕಂಡುಬಂದಲ್ಲಿ ನೇರವಾಗಿ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಹಾಗೂ ಜಿಪಂ ಸಿಇಒ ಡಾ. ಕುಮಾರ್ (ಮೊ. 9480862000) ಇವರನ್ನು ಸಹ ಸಂಪರ್ಕಿಸಬಹುದು ಎಂದರು.
ಈ ಬಾರಿ ಸಾರ್ವಜನಿಕರು ಚುನಾವಣಾ ಸಂಬಂಧಿತ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಚುನಾವಣಾ ಆಯೋಗವು CVIGIL MOBILE APP ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಫೋಟೋ ಹಾಗೂ ವಿಡಿಯೋಗಳ ಮುಖಾಂತರ ದೂರುಗಳನ್ನು ದಾಖಲಿಸಬಹುದಾಗಿದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸುವಿಧಾ ಆ್ಯಪ್ ಮುಖಾಂತರ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿಯನ್ನು ಪಡೆಯಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.