ಅಕ್ಷರ ದಾಸೋಹ ನೌಕರರ ಉಡುಪಿ ಜಿಲ್ಲಾ ಸಮ್ಮೇಳನ: ನಿವೃತ್ತಿ ವೇತನ, ಖಾಯಮಾತಿಗಾಗಿ ತೀವ್ರ ಹೋರಾಟಕ್ಕೆ ಕರೆ

ಉಡುಪಿ: ಅಕ್ಷರ ದಾಸೋಹ ನೌಕರರಿಗೆ ನಿವೃತ್ತಿ ವೇತನ, ಖಾಯಮಾತಿಗೆ ಹಾಗೂ ಕನಿಷ್ಠ ಕೂಲಿಗಾಗಿ ಸಂಘಟನೆಯು ಸಿಐಟಿಯು ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಹೇಳಿದ್ದಾರೆ.
ಉಡುಪಿ ಬನ್ನಂಜೆಯಲ್ಲಿರುವ ನಾರಾಯಣಗುರು ಮಂದಿರದ ಸಭಾಭವನ ದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ನೌಕರರ ಸತತ ಹೋರಾಟಗಳಿಂದ ವೇತನದಲ್ಲಿ ಸ್ವಲ್ಪಮಟ್ಟದ ಏರಿಕೆ ಮಾಡಿಕೊಳ್ಳಲಾಗಿದೆ. ಈ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠಗೊಳಿಸಿ ನ್ಯಾಯ ಪಡೆಯಬೇಕು ಎಂದವರು ಹೇಳಿದರು.
ಸಿಐಟಿಯು ಜಿಲ್ಲಾ ಮುಖಂಡ ಶಶಿಧರ ಗೊಲ್ಲ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಜಯಶ್ರೀ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ ವರದಿ, ಲೆಕ್ಕಪತ್ರ ಮಂಡಿಸಿದರು. ವರದಿ ಮೇಲೆ ಚರ್ಚೆ ನಡೆದು ಅಂಗೀಕರಿಸಲಾಯಿತು.
ನೂತನ ಸಮಿತಿ ರಚನೆ: ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಯಶ್ರೀ, ಪ್ರಧಾನ ಕಾರ್ಯದರ್ಶಿ ಯಾಗಿ ಸುನಂದ, ಕೋಶಾಧಿಕಾರಿಯಾಗಿ ಕಮಲ ಆಯ್ಕೆಗೊಂಡರು. ಪದಾಧಿಕಾರಿಗಳು ಸೇರಿದಂತೆ ೧೯ ಮಂದಿ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ಜಿಲ್ಲಾ ಮುಖಂಡರಾದ ಕಮಲ, ಸಿಂಗಾರಿ ನಾವುಂದ, ನಾಗರತ್ನ ಕುಂದಾಪುರ, ರತ್ನ ಉಡುಪಿ, ಜಯಶ್ರೀ ಕಾರ್ಕಳ, ಜ್ಯೋತಿ ಅಜೆಕಾರು ಮುಂತಾದವರಿದ್ದರು.

