ಸರಕಾರದ ನಿರ್ಧಾರಗಳಿಂದ ಶಿಕ್ಷಣದ ಗುಣಮಟ್ಟ ಕುಸಿತ: ಪ್ರೊ.ವಿ.ಪಿ.ನಿರಂಜನ ಆರಾಧ್ಯ

ಬೆಂಗಳೂರು, ಎ.12: ‘ಬಿಜೆಪಿ ಸರಕಾರವು ತೆಗೆದುಕೊಂಡ ಕೆಲವು ಕೆಟ್ಟ ನಿರ್ಧಾರಗಳು ಮತ್ತು ನೀತಿಗಳಿಂದ ರಾಜ್ಯದ ಶಿಕ್ಷಣದ ಗುಣಮಟ್ಟ ಕುಸಿದಿದ್ದು, ಇದು ಮುಂದುವರೆದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ’ ಎಂದು ಶಿಕ್ಷಣ ತಜ್ಞ ಪ್ರೊ.ವಿ.ಪಿ.ನಿರಂಜನ ಆರಾಧ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಕಾರ್ಯವೈಖರಿ ಪರಿಶೀಲಿಸಿದಾಗ ಸರಕಾರವು ಶಿಕ್ಷಣ ವಲಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಕೋವಿಡ್ ಕಾರಣಕ್ಕಾಗಿ ಎರಡು ವರ್ಷಗಳಿಂದ ಶಾಲೆಗಳು ಮುಚ್ಚಿದ್ದರಿಂದಲೇ ಸಮಾಜದ ಅಂಚಿನಲ್ಲಿರುವ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ಇದುವರೆಗೂ ರಾಜ್ಯ ಸರಕಾರವು ಸರಿದೂಗಿಸಿಲ್ಲ ಎಂದು ದೂರಿದರು.
ಸರಕಾರಿ ಶಾಲೆಗಳಲ್ಲಿ ಶೇ.57ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಇದನ್ನು ಸರಕಾರವು ತುಂಬುವ ಪ್ರಯತ್ನ ಮಾಡುತ್ತಿಲ್ಲ. ಶಿಕ್ಷಣದಲ್ಲಿ ಬ್ರಾಹ್ಮಣೀಕರಣವನ್ನು ತರುವ ನಿಟ್ಟಿನಲ್ಲಿ ಸಾತ್ವಿಕ ಆಹಾರದ ಬಗ್ಗೆ ಪ್ರಚಾರ ನೀಡಲಾಗಿದೆ. ಶಾಲೆಗಳಲ್ಲಿ ಹಿಜಾಬ್ ನಿಷೇಧವಾದ ಕಾರಣ ಕೋಮುವಾದಕ್ಕೆ ಎಡೆ ಮಾಡಿಕೊಡಲಾಗಿದೆ. ಹಾಗೆಯೇ ಮುಸ್ಲಿಮರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನೂ ಕಿತ್ತು ಹಾಕಲಾಗಿದೆ ಎಂದು ತಿಳಿಸಿದರು.
ಪಠ್ಯಪರಿಷ್ಕರಣೆಯ ನೆಪದಲ್ಲಿ ದಲಿತ, ಮುಸ್ಲಿಮ್, ಮಹಿಳೆ ಮತ್ತು ಪ್ರಗತಿಪರ ಲೇಖಕರ ಬರವಣಿಗೆಗಳನ್ನು ತೆಗೆದು ಹಾಕಲಾಗಿದೆ. ಹಾಗೆಯೇ ಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚುವ ಲೇಖನಗಳನ್ನೂ ಸೇರಿಸಲಾಗಿದೆ. 13 ಸಾವಿರ ಸರಕಾರಿ ಶಾಲೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಶಾಲೆಗಳನ್ನು ಮುಚ್ಚಲು ಸರಕಾರ ಹೊರಟಿರುವುದು ಖಂಡನೀಯ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಆರು ವಿವಿಗಳನ್ನು ಚರ್ಚಿಸದೆ ಸ್ಥಾಪಿಸಲಾಗಿದೆ. ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ)ನಂತಹ ಉತ್ತಮ ವಿಶ್ವವಿದ್ಯಾಲಯಗಳು ತನ್ನದೆ ಆದ ಆದಾಯವನ್ನು ಗಳಿಸುವಂತಹ ನೀತಿಯನ್ನು ರೂಪಿಸಿದ ಬಳಿಕ ಅದು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಹಾಗೆಯೇ ಈ ನಡುವೆ ಕನ್ನಡ ವಿವಿಗೆ ಹಣದ ಕೊರತೆ ಉಂಟಾಗುವಂತೆ ಸರಕಾರವು ಮಾಡಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಎಸ್‍ಐಓನ ಮೊಹಮ್ಮದ್ ಪೀರ್, ಐಸಾ ಸಂಘಟನೆಯ ಪ್ರತಿನಿಧಿ ಸಾನಿಯಾ ಎನ್., ಸಾಮಾಜಿಕ ಕಾರ್ಯಕರ್ತ ಅನಂತ್, ಅಮೀನಾ, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







