ತೈವಾನ್ ಸುತ್ತುವರಿದ ಸಮರಾಭ್ಯಾಸ ಗಂಭೀರ ಎಚ್ಚರಿಕೆ: ಚೀನಾ

ಬೀಜಿಂಗ್, ಎ.12: ತೈವಾನ್ ಸುತ್ತುವರಿದು ಇತ್ತೀಚೆಗೆ ನಡೆಸಿದ ಅಣಕುದಾಳಿ ಕಾರ್ಯಾಚರಣೆಯು ಸ್ವ ಆಡಳಿತ ವ್ಯವಸ್ಥೆಯಿರುವ ದ್ವೀಪದ ಸ್ವಾತಂತ್ರ್ಯದ ಪರವಿರುವ ರಾಜಕಾರಣಿಗಳು ಹಾಗೂ ಅವರ ವಿದೇಶಿ ಬೆಂಬಲಿಗರಿಗೆ ಒಂದು ಗಂಭೀರ ಎಚ್ಚರಿಕೆಯಾಗಿದೆ ಎಂದು ಚೀನಾದ ವಕ್ತಾರರು ಹೇಳಿದ್ದಾರೆ.
`ಜಂಟಿ ಖಡ್ಗ' ಎಂಬ ಹೆಸರಿನ ಮೂರು ದಿನದ ಸಮರಾಭ್ಯಾಸವು ಸೋಮವಾರ ಅಂತ್ಯಗೊಂಡಿದೆ. `ಚೀನೀ ಸೇನೆಯು ತೈವಾನ್ ಜಲಸಂಧಿ ಮತ್ತು ಅದರ ಸುತ್ತಮುತ್ತಲಿನ ಸಮುದ್ರವ್ಯಾಪ್ತಿಯಲ್ಲಿ ಇತ್ತೀಚೆಗೆ ಸರಣಿ ಪ್ರತಿಕ್ರಮಗಳನ್ನು ಕೈಗೊಂಡಿದೆ. ಇದು ತೈವಾನ್ ಸ್ವಾತಂತ್ರ್ಯ ಬಯಸುವ ಪ್ರತ್ಯೇಕತಾವಾದಿ ಶಕ್ತಿಗಳು ಮತ್ತು ಅವರಿಗೆ ಬೆಂಬಲ ನೀಡುವ ಬಾಹ್ಯ ಶಕ್ತಿಗಳಿಗೆ ಒಂದು ಗಂಭೀರ ಎಚ್ಚರಿಕೆಯಾಗಿದೆ. ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಇದು ಅಗತ್ಯ ಕ್ರಮವಾಗಿದೆ ಎಂದು ಚೀನಾ ಸರಕಾರದ ತೈವಾನ್ ವ್ಯವಹಾರ ಇಲಾಖೆಯ ವಕ್ತಾರ ಝು ಫೆಂಗ್ಲಿಯಾನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಈ ಸಮರಾಭ್ಯಾಸವು ತೈವಾನ್ನಲ್ಲಿರುವ ನಮ್ಮ ದೇಶಬಾಂಧವರನ್ನು ಉದ್ದೇಶಿಸಿ ನಡೆಸಿದ್ದಲ್ಲ. ತೈವಾನ್ ಸ್ವಾತಂತ್ರ್ಯ ಬಯಸುವ ಪ್ರತ್ಯೇಕತಾವಾದಿಗಳ ಪ್ರಚೋದನಾ ಕೃತ್ಯಗಳಿಂದ ಆಗುವ ಗಂಭೀರ ಪರಿಣಾಮಗಳ ಬಗ್ಗೆ ತೈವಾನ್ ನ ದೇಶಬಾಂಧವರು ಸ್ಪಷ್ಟವಾಗಿ ಗುರುತಿಸಬೇಕು . ತಪ್ಪು ಮತ್ತು ಸರಿ ಯಾವುದೆಂದು ಅರಿತುಕೊಂಡು ಇತಿಹಾಸದ ಸರಿಯಾದ ಬದಿಯಲ್ಲಿ ನಿಲ್ಲಬೇಕು' ಎಂದವರು ಹೇಳಿದ್ದಾರೆ. ಸ್ವಂತ ಆಡಳಿತ ವ್ಯವಸ್ಥೆಯಿರುವ ತೈವಾನ್ ತನ್ನ ಭೂಭಾಗಕ್ಕೆ ಸೇರಿದೆ ಎಂದು ಚೀನಾ ಪ್ರತಿಪಾದಿಸುತ್ತಿದೆ.