ಹಕ್ಕಿಜ್ವರದಿಂದ ಪ್ರಥಮ ಸಾವಿನ ಪ್ರಕರಣ ಚೀನಾದಲ್ಲಿ ದಾಖಲು: ವಿಶ್ವ ಆರೋಗ್ಯ ಸಂಸ್ಥೆ ವರದಿ

ಬೀಜಿಂಗ್, ಎ.12: ಚೀನಾದ ಮಹಿಳೆಯೊಬ್ಬರು ಮನುಷ್ಯರಲ್ಲಿ ಅಪರೂಪವಾದ ಎಚ್3ಎನ್8 ಹಕ್ಕಿಜ್ವರದಿಂದ ಸಾವನ್ನಪ್ಪಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ . ಆದರೆ ಈ ಸೋಂಕು ಜನರ ಮಧ್ಯೆ ಹರಡುವ ಲಕ್ಷಣಗಳಿಲ್ಲ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದಕ್ಷಿಣ ಚೀನಾದ ಗ್ವಾಂಗ್ಡಾಂಗ್ ಪ್ರಾಂತದ 56 ವರ್ಷದ ಮಹಿಳೆ ಏವಿಯನ್ ಇನ್ಫ್ಲುಯೆಂಝಾದ ಎಚ್3ಎನ್8 ಉಪತಳಿಯ ಸೋಂಕಿಗೆ ಒಳಗಾದ 3ನೇ ವ್ಯಕ್ತಿಯಾಗಿದ್ದು ಈ ಎಲ್ಲಾ ಪ್ರಕರಣಗಳೂ ಚೀನಾದಲ್ಲೇ ದಾಖಲಾಗಿವೆ. ಮೊದಲಿನ 2 ಪ್ರಕರಣಗಳು ಕಳೆದ ವರ್ಷ ದಾಖಲಾಗಿತ್ತು. ಎನೇ ಸೋಂಕು ಪ್ರಕರಣದ ಬಗ್ಗೆ ರೋಗ ನಿಯಂತ್ರಣ ಮತ್ತು ತಡೆಗಾಗಿನ ಗ್ವಾಂಗ್ಡಾಂಗ್ ಪ್ರಾಂತೀಯ ಕೇಂದ್ರ ವರದಿ ಮಾಡಿತ್ತು, ಆದರೆ ಮಹಿಳೆಯ ಸಾವಿನ ಕುರಿತ ವಿವರ ಒದಗಿಸಿಲ್ಲ. ಮಹಿಳೆ ಕೋಳಿ ಸಾಕಾಣಿಕೆ ವೃತ್ತಿಯಲ್ಲಿದ್ದರು ಎಂಬ ಮಾಹಿತಿಯಿದೆ ಎಂದು ವಿಶ್ವ ಆರೋಗ್ಯ ಕೇಂದ್ರ ಹೇಳಿದೆ.
ಬೃಹತ್ ಕೋಳಿ ಫಾರಂಗಳಲ್ಲಿ ಮತ್ತು ಕಾಡುಹಕ್ಕಿಗಳಲ್ಲಿ ಏವಿಯನ್ ಫ್ಲೂ ಸೋಂಕು ನಿರಂತರವಾಗಿ ಪರಿಚಲನೆಯಲ್ಲಿರುವ ಚೀನಾದಲ್ಲಿ ಜನರಲ್ಲಿ ಸೋಂಕಿನ ಪ್ರಕರಣ ವಿರಳವಾಗಿದೆ. ಮಹಿಳೆ ಅಸ್ವಸ್ಥಗೊಳ್ಳುವ ಮುನ್ನ ಭೇಟಿ ನೀಡಿದ್ದ ಮಾಂಸ ಮತ್ತು ಮೀನು ಮಾರುಕಟ್ಟೆಯಿಂದ ಸಂಗ್ರಹಿಸಲಾದ ಸ್ಯಾಂಪಲ್ನಲ್ಲಿ ಎಚ್3 ಸೋಂಕಿನ ಅಂಶ ದೃಢಪಟ್ಟಿದೆ. ಈ ಮಾರುಕಟ್ಟೆ ಸೋಂಕಿನ ಮೂಲ ಆಗಿರುವ ಸಾಧ್ಯತೆಯಿದೆ. ಮಾನವರಲ್ಲಿ ಅಪರೂಪವಾದರೂ, ಎಚ್3ಎನ್8 ಪಕ್ಷಿಗಳಲ್ಲಿ ಸಾಮಾನ್ಯವಾಗಿದ್ದು ಇದು ರೋಗಲಕ್ಷಣದ ಯಾವುದೇ ಸೂಚನೆಯನ್ನು ನೀಡುವುದಿಲ್ಲ.
ಇದು ಇತರ ಸಸ್ತನಿಗಳಲ್ಲೂ ಸೋಂಕಿಗೆ ಕಾರಣವಾಗಿದೆ. ಸೋಂಕಿತ ಮಹಿಳೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದವರಲ್ಲಿ ಹಕ್ಕಿಜ್ವರದ ಲಕ್ಷಣ ಕಂಡುಬಂದಿಲ್ಲ. ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಹೇಳುವುದಾದರೆ ಈ ಸೋಂಕು ವ್ಯಕ್ತಿಗಳಿಂದ ವ್ಯಕ್ತಿಗೆ ಸುಲಭದಲ್ಲಿ ಪ್ರಸಾರಗೊಳ್ಳುವ ಸಾಮಥ್ರ್ಯ ಹೊಂದಿಲ್ಲ. ಆದ್ದರಿಂದ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನವರೊಳಗೆ ಪ್ರಸಾರಗೊಳ್ಳುವ ಅಪಾಯ ಕಡಿಮೆ ಎಂದು ಪರಿಗಣಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ.