ಜಾತಿವಾದಿ ಟಿಕ್ ಟಾಕ್ ವೀಡಿಯೊ: ಭಾರತೀಯ ಮೂಲದ ವ್ಯಕ್ತಿಗೆ ಜೈಲುಶಿಕ್ಷೆ

ಲಂಡನ್, ಎ.12: ಭಾರತೀಯ ಮೂಲದ ವ್ಯಕ್ತಿಯೋರ್ವ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದ ಟಿಕ್ಟಾಕ್ ವೀಡಿಯೊ ಕೆಲವು ಸಮುದಾಯದವರ ಭಾವನೆಗೆ ಘಾಸಿ ಎಸಗಿದೆ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನಿಗೆ 18 ತಿಂಗಳ ಜೈಲುಶಿಕ್ಷೆಯನ್ನು ಬ್ರಿಟನ್ ನ್ಯಾಯಾಲಯ ವಿಧಿಸಿದೆ.
ಆಗ್ನೇಯ ಇಂಗ್ಲೆಂಡಿನ ಬರ್ಕ್ಶೈರ್ ನಿವಾಸಿ ಅಮ್ರಿಕ್ ಬಾಜ್ವಾ ಸಾರ್ವಜನಿಕ ಸಂವಹನ ನೆಟ್ವರ್ಕ್ ಮೂಲಕ ಪ್ರಸಾರ ಮಾಡಿದ ಆಕ್ಷೇಪಾರ್ಹ, ಅಸಭ್ಯ ಸಂದೇಶ ಅಥವಾ ವಿಷಯಕ್ಕೆ ಸಂಬಂಧಿಸಿ ಆತ 1 ಕೌಂಟ್ ಅಪರಾಧ ಎಸಗಿರುವುದು ಸಾಬೀತಾಗಿರುವುದರಿಂದ 18 ತಿಂಗಳ ಜೈಲುಶಿಕ್ಷೆ, 240 ಬ್ರಿಟನ್ ಪೌಂಡ್ ಗಳಷ್ಟು ದಂಡ ವಿಧಿಸಲಾಗಿದೆ.
ಥೇಮ್ಸ್ ವ್ಯಾಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ವ್ಯಕ್ತಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವರ್ಷದ ಜುಲೈ 19ರಂದು ಈತ ದಲಿತ ಸಮುದಾಯವನ್ನು ಉದ್ದೇಶಿಸಿ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Next Story