ಉಪ್ಪಿನಂಗಡಿ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಕ್ಯಾ. ಗಣೇಶ್ ಕಾರ್ಣಿಕ್‌ರನ್ನು ತರಾಟೆಗೆತ್ತಿಕೊಂಡ ಕಾರ್ಯಕರ್ತರು

ಉಪ್ಪಿನಂಗಡಿ: ಎಂಎಲ್‍ಎ ಟಿಕೆಟ್ ವಂಚಿತರಾದ ಸಂಜೀವ ಮಠಂದೂರು ಅವರ ಮನೆಗೆ ಬುಧವಾರ ಸಂಜೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಬಗ್ಗೆ ವರದಿಯಾಗಿದೆ.
ಮನೆಗೆ ಆಗಮಿಸುತ್ತಿದ್ದಂತೆಯೇ ಮನೆಯ ಹೊರಗೆಯೇ ತಡೆದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಜೀವ ಮಠಂದೂರು ಅವರನ್ನು ಕಡೆಗಣಿಸಲು ಕಾರಣವೇನೆಂದು ಪ್ರಶ್ನಿಸಿದ ಕಾರ್ಯಕರ್ತರು ಹಾಗಾದರೆ ಮಂಡಲ, ಜಿಲ್ಲೆಯ ಪದಾಧಿಕಾರಿಗಳ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಬೆಲೆ ಇಲ್ಲವೆಂದಾದರೆ ನೀವು ಹುದ್ದೆಯಲ್ಲಿರುವುದಾದರು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈಗ ಅವರನ್ನು ಕಡೆಗಣಿಸುವುದು ಎಂದಾದರೆ, ಇದರ ಅರ್ಥವೇನು? ಪ್ರಾಮಾಣಿಕರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ ಎಂದಾಯಿತು. ನಾವು ಬಿಜೆಪಿ ಪರವಾಗಿ ಕೆಲಸವೇ ಮಾಡುವುದಿಲ್ಲ. ನೀವೇ ಪ್ರಚಾರ ಕಾರ್ಯ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ ಎಂದು ಅಸಹನೆ ಹೊರ ಹಾಕಿದರು. ಸುಮಾರು 15 ನಿಮಿಷದಷ್ಟು ಕಾಲ ಗೊಂದಲಗಳು ನಡೆದು, ಬಳಿಕ ನಾಯಕರು ಮನೆಯೊಳಗೆ ಹೋಗಿ ಸಂಜೀವ ಮಠಂದೂರು ಅವರನ್ನು ಮಾತನಾಡಿಸಿದರು ಎಂದು ತಿಳಿದುಬಂದಿದೆ.
ವಿಡೀಯೋ, ಪೋಟೋ ಡಿಲೀಟ್! ?: ಈ ಗೊಂದಲಗಳ ವೀಡಿಯೋ, ಪೋಟೋಗಳನ್ನು ಕೆಲವು ಕಾರ್ಯಕರ್ತರು ತೆಗೆದಿದ್ದು, ಬಳಿಕ ನಾಯಕರ ಸೂಚನೆಯಂತೆ ಅವುಗಳನ್ನು ಡಿಲೀಟ್ ಮಾಡಿಸಲಾಯಿತು ಎಂಬ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ. ಆದರೆ ಅದರಲ್ಲೊಂದು ವೀಡಿಯೋ ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷರೊಂದಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮತ್ತಿತರರಿದ್ದರು.