ಕಿನ್ನಿಗೋಳಿ ಶಾಂತಿನಗರ ಜುಮಾ ಮಸೀದಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಕಿನ್ನಿಗೋಳಿ: ಇಲ್ಲಿನ ಶಾಂತಿನಗರ ಖಿಲ್ರಿಯಾ ಜುಮಾ ಮಸೀದಿ ಸುವರ್ಣ ಮಹೋತ್ಸವ ಅಂಗವಾಗಿ ಕೆಜೆಎಂ ಸಮುದಾಯ ಭವನದಲ್ಲಿ ʼಸೌಹಾರ್ದ ಇಫ್ತಾರ್ ಕೂಟʼ ರವಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರುಗಳಾದ ಫಾ. ಫಾವುಸ್ತಿನ್ ಲೂಕಸ್ ಲೋಬೋ ಮಾತನಾಡಿ, ಯೇಸು ಕ್ರಿಸ್ತರು ಪ್ರತಿಯೊಬ್ಬರನ್ನು ಧರ್ಮ ನೋಡದೇ ಪ್ರೀತಿಸಲು ಕಲಿಸಿಕೊಟ್ಟರು. ಅಂತೆಯೇ ಪ್ರತೀ ಧರ್ಮವು ಪ್ರೀತಿ, ಮಾನವೀಯತೆಯನ್ನು ಕಲಿಸಿಕೊಟ್ಟಿದೆ. ಎಲ್ಲ ಧರ್ಮವು ಶ್ರೇಷ್ಠವಾಗಿದ್ದು ಅದನ್ನು ಅರಿತು ಬಾಳಬೇಕು. ರಂಝಾನ್ ಮುಸ್ಲಿಮರ ಪಾಲಿಗೆ ವಿಶೇಷ ತಿಂಗಳಾಗಿದ್ದು, ದೇವರ ಸಾಮೀಪ್ಯಕ್ಕೆ ಕೊಂಡೊಯ್ಯುವ ತಿಂಗಳಾಗಿದೆ. ಇಂತಹ ಸಮಯದಲ್ಲಿ ಸೌಹಾರ್ದ ಇಫ್ತಾರ್ ಕೂಟಗಳು ಸಮಾಜದಲ್ಲಿ ಶಾಂತಿ ನೆಲೆಸಲು ಪ್ರೇರಣೆಯಾಗಲಿದೆ ಎಂದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಕಿನ್ನಿಗೋಳಿ ಪರಿಸರವು ಸೌಹಾರ್ದ, ಸಹಬಾಳ್ವೆಗೆ ಹೆಸರಾದ ಊರು. ಇಂತಹ ಬಾಂಧವ್ಯ ಬೆಸೆಯುವ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಿರಬೇಕು. ನಮ್ಮ ನಡುವಿನ ಭಾವೈಕ್ಯತೆ ಸದಾ ಗಟ್ಟಿಯಾಗಿರುವಂತಾಗಬೇಕೆಂದು ಶುಭ ಹಾರೈಸಿದರು.
ಖಿಲ್ರಿಯಾ ಜುಮಾ ಮಸೀದಿ ಖತೀಬ್ ಉಮರುಲ್ ಫಾರೂಕ್ ಸಖಾಫಿ ದುವಾ ಆಶೀರ್ವಚನ ನೆರವೇರಿಸಿದರು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ಕೆಜೆಎಂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹಾಜಿ ಟಿ.ಎಚ್. ಮಯ್ಯದ್ದಿ, ಚರ್ಚ್ ಆಡಳಿತ ಸಮಿತಿಯ ವಿಲಿಯಂ ಡಿಸೋಜಾ, ಉದ್ಯಮಿಗಳಾದ ಪ್ರಕಾಶ್ ಡಿಸೋಜಾ, ಜೊಸ್ಸಿ ಪಿಂಟೋ ಉಪಸ್ಥಿತರಿದ್ದರು.
ಟಿ.ಕೆ. ಅಬ್ದುಲ್ ಖಾದರ್ ನಿರೂಪಿಸಿ, ಮುಹಮ್ಮದ್ ಇರ್ಷಾದ್ ವಂದಿಸಿದರು.