ಎ.15ರಂದು ಪ್ರಾಚಿ ಫೌಂಡೇಶನ್‌ನಿಂದ ಬಿಸು ಸಂಭ್ರಮ: ಪ್ರಶಸ್ತಿ ಪ್ರದಾನ, ನಮ್ಮೂರ ಕರಕುಶಲ ಕಲೆಗಳ ಮೇಳ

ಉಡುಪಿ, ಎ.13: ಪ್ರಾಚಿ ಫೌಂಡೇಶನ್ ಉಡುಪಿ, ಆನಂದ ತುಳಸೀವನ ಟ್ರಸ್ಟ್ ಮತ್ತು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಎ.15 ಶನಿವಾರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಬಿಸು ಸಂಭ್ರಮ ಮತ್ತು ಒಂದು ದಿನದ ನಮ್ಮೂರ ಕರಕುಶಲ ಕರ್ಮಿಗಳ ಮೇಳ ನಡೆಯಲಿದೆ.
ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದರವರೆಗೆ ಬುಟ್ಟಿ, ಚಾಪೆ ಹೆಣೆಯು ವವರು, ಮಡಕೆ, ಮರದ ಮರಿಗೆ ತಯಾರಕರು, ಪಂಚಲೋಹದ ಎರಕ, ಕೊಳಲು, ಮದ್ದಲೆ ತಯಾರಕರ ಜೊತೆಗೆ 25ಕ್ಕೂ ಹೆಚ್ಚು ನಮ್ಮೂರ ಕರಕುಶಲ ಕರ್ಮಿಗಳಿಂದ ಉತ್ಪನ್ನಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ನಡೆಯಲಿದೆ.
ಬೆಳಗ್ಗೆ 11:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಯುಗಾದಿ ಸಂದೇಶ ನೀಡಲಿದ್ದಾರೆ. ಬಿ.ವಿ.ಕೆ ಮಣಿಪಾಲದ ಹಿರಿಯ ನಿರ್ದೇಶಕ ಜಗದೀಶ್ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಗೌರವ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್ ಉಪಸ್ಥಿತರಿರುವರು.
ಮೂವರು ಕರಕುಶಲಕರ್ಮಿಗಳಿಗೆ ಬಿಸು ಪ್ರಶಸ್ತಿ: ಇದೇ ಸಂದರ್ಭದಲ್ಲಿ ಮದ್ದಲೆ ತಯಾರಕರಾದ ಕಾಸರಗೋಡು ವೆಂಕಟರಮಣ, ಮಡಕೆ ತಯಾರಕರಾದ ಲೀಲಾ ವರಂಗ ಹಾಗೂ ಕಡಗೋಲು ತಯಾರಕ ಕೆರ್ವಾಶೆಯ ಸದಾನಂದ ಗುಡಿಗಾರ್ ಇವರಿಗೆ ಬಿಸು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಾಚಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಪುರುಷೋತ್ತಮ ಅಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.