ಇನ್ನೂ ಬಟಿಂಡಾ ದಾಳಿಕೋರರ ಸುಳಿವು ಇಲ್ಲ!

ಬಟಿಂಡಾ: ಇಲ್ಲಿನ ಸೇನಾ ನೆಲೆಯ ಮೇಲೆ ದಾಳಿ ನಡೆಸಿ ನಾಲ್ಕು ಮಂದಿ ಸೈನಿಕರನ್ನು ಹತ್ಯೆ ಮಾಡಿದ ಇಬ್ಬರು ಮುಸುಕುಧಾರಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ. ದಾಳಿಕೋರರಲ್ಲಿ ಒಬ್ಬ ಕೊಡಲಿ ಹಿಡಿದಿರುವುದು ಕಂಡುಬಂದಿತ್ತು. ಆದರೆ ಮೃತಪಟ್ಟ ಸೈನಿಕರ ಪೈಕಿ ಯಾರ ದೇಹದಲ್ಲೂ ಕೊಡಲಿಯೇಟಿನ ಗುರುತುಗಳು ಕಂಡುಬಂದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿರುವುದು ಪೊಲೀಸರನ್ನು ತಬ್ಬಿಬ್ಬಾಗಿಸಿದೆ.
ಬುಧವಾರ ನಸುಕಿನಲ್ಲಿ ನಡೆದ ದಾಳಿಯಲ್ಲಿ ಯೋಗೀಶ್ ಕುಮಾರ್, ಸಾಗರ್ ಬನ್ನೆ, ಕಮಲೇಶ್ ಆರ್ ಹಾಗೂ ಸಂತೋಷ್ ಎಂ ನಾಗರಾಳ ಮೃತಪಟ್ಟಿದ್ದರು.
ದಾಳಿಯ ಬಳಿಕ ಮುಸುಕುಧಾರಿಗಳು ತಲೆ ಮರೆಸಿಕೊಂಡಿದ್ದು, ದಾಳಿಕೋರರು ಸೇನಾ ನೆಲೆಯ ಒಳಗಿನವರೇ ಅಥವಾ ನುಸುಳುಕೋರರೇ ಎನ್ನುವ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ.
ತನಿಖಾ ವಿಭಾಗದ ಬಟಿಂಡಾ ಎಸ್ಪಿ ಅಜಯ್ ಗಾಂಧಿ ಈ ಬಗ್ಗೆ ಹೇಳಿಕೆ ನೀಡಿ, "ಹಂತಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಎಲ್ಲ ನಾಲ್ಕು ಮಂದಿ ಯೋಧರು ಮೃತಪಟ್ಟಿರುವುದು ಗುಂಡೇಟಿನ ಗಾಯದಿಂದ ಎನ್ನುವುದನ್ನು ಅಟಾಪ್ಸಿ ವರದಿಯಿಂದ ತಿಳಿದು ಬಂದಿದೆ"
ಸೇನಾ ನೆಲೆಯಲ್ಲಿ ಲಘುರಾಜ್ ಎಂಬ ಮತ್ತೊಬ್ಬ ಸೈನಿಕ ಮೃತಪಟ್ಟಿರುವುದು ಪತ್ತೆಯಾಗಿದ್ದು, ಈತನ ತಲೆಯಲ್ಲಿ ಗುಂಡೇಟು ಕಂಡುಬಂದಿದೆ. ಜತೆಗೆ ಅವರ ಅಧಿಕೃತ ಬಂದೂಕು ಪಕ್ಕದಲ್ಲೇ ಪತ್ತೆಯಾಗಿದೆ. ಇದು ಆತ್ಮಹತ್ಯೆ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದು, ನಾಲ್ವರು ಸೈನಿಕರ ಸಾವಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.







